ಬೆಂಗಳೂರು: ಸಹಾಯಕ ಅಭಿಯೋಜಕರ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆಯನ್ನು ತುರ್ತಾಗಿ ನಡೆಸುವಂತೆ ಬೆಂಗಳೂರು ವಕೀಲರ ಸಂಘ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಕಳೆದ 2020ರ ಜೂನ್ 21ರಂದು ನಡೆಯಬೇಕಿದ್ದ ಸಹಾಯಕ ಅಭಿಯೋಜಕರ ಪೂರ್ವಭಾವಿ ಪರೀಕ್ಷೆಯನ್ನು ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದೂಡಿತ್ತು.
ಪ್ರಸ್ತುತ ಕೊರೊನಾ ತೀವ್ರತೆ ಕಡಿಮೆಯಾಗಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅಲ್ಲದೆ, ಹೈಕೋರ್ಟ್ ಹಾಗೂ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳ ಕಲಾಪಗಳು ಎಂದಿನಂತೆ ಪ್ರಾರಂಭವಾಗಿವೆ. ನ್ಯಾಯಾಲಯಗಳಲ್ಲಿ ಸಾಕಷ್ಟು ಸಹಾಯಕ ಅಭಿಯೋಜಕರ ಹುದ್ದೆಗಳು ಖಾಲಿಯಿವೆ.
ಓದಿ: ಮೀಸಲಾತಿಗಾಗಿ ಹೋರಾಟ ವಿಚಾರ, ಸರ್ಕಾರ ನಿರ್ಧಾರ ಕೈಗೊಳ್ಳಬೇಕು: ಹೆಚ್ಡಿಕೆ
ಆದ್ದರಿಂದ ಸಹಾಯಕ ಅಭಿಯೋಜಕರ ಪೂರ್ವಭಾವಿ ಪರೀಕ್ಷೆಯನ್ನು ತುರ್ತಾಗಿ ನಡೆಸಿ, ನೇಮಕಾತಿ ಮಾಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಅವರು ರಾಜ್ಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಿಗೆ ಒತ್ತಾಯಿಸಿದ್ದಾರೆ.