ಬೆಂಗಳೂರು: ಎಸ್ಡಿಪಿಐ ಮನಸ್ಥಿತಿ ಇನ್ನು ಬದಲಾಗಿಲ್ಲ. ಹಿಂದೂಗಳನ್ನ ಕೊಲೆ ಮಾಡುವ ಅವರ ಮನಸ್ಥಿತಿ ಮುಂದುವರೆದಿದೆ. ಕೇರಳ ಸೇರಿ ಹೊರಭಾಗದಿಂದ ಬಂದವರಿಂದ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಶಿವಮೊಗ್ಗ ಗಲಭೆ ಕುರಿತು ಮುಖ್ಯಮಂತ್ರಿಗಳಿಗೆ ಸಮಗ್ರ ಮಾಹಿತಿ ನೀಡಿದ್ದೇನೆ. ಆರೋಪಿಗಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಶಿವಮೊಗ್ಗ ಗಲಭೆ ಕುರಿತು ಚರ್ಚಿಸಿದರು. ಘಟನೆ ಬೆಳವಣಿಗೆಗಳ ಕುರಿತು ಸಿಎಂಗೆ ಸಮಗ್ರ ಮಾಹಿತಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಗ್ಗೆ ಸರ್ಕಾರಿ ಕಾರ್ಯಕ್ರಮ ಕೂಡ ಯಶಸ್ವಿಯಾಯಿತು. ಬಿಜೆಪಿಯ ಅಮೃತ ಮಹೋತ್ಸವ ಕಾರ್ಯಕ್ರಮ ಕೂಡ ಯಶಸ್ವಿಯಾಯಿತು. ಎಲ್ಲರೂ ಕೂಡ ಮನೆಗೆ ಹೋದೆವು. ಅಷ್ಟರೊಳಗೆ ಎಸ್ಡಿಪಿಐ ಕಾರ್ಯಕರ್ತರು ಸಾವರ್ಕರ್ ಫೋಟೋ ತೆಗೆದು ಹಾಕಿದರು. ಇದರಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಈ ಮಧ್ಯೆ ಗಾಂಧಿ ಬಜಾರ್ನಲ್ಲಿ ಪ್ರೇಮ್ ಸಿಂಗ್ ಹಾಗೂ ಶರವಣ ಎಂಬುವರು ಹೋಗುತ್ತಿರುವ ಸಂದರ್ಭದಲ್ಲಿ 6 ಜನ ಮತ್ತೊಂದು ಕೋಮಿನ ಗುಂಡಾಗಳು ಪ್ರೇಮ್ ಸಿಂಗ್ಗೆ ಚಾಕು ಹಾಕಿದ್ದಾರೆ. ಆತ ಬದುಕುಳಿಯೋದು ಕಷ್ಟ ಎನ್ನಲಾಗುತ್ತಿದೆ. ಪೊಲೀಸರು ಬಹಳ ಶ್ರಮಹಾಕಿ ಆರೋಪಿಗಳ ಹುಡುಕಾಡುವ ಸಂದರ್ಭದಲ್ಲಿ ಒಬ್ಬನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಅಲ್ಲದೇ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ಅಂಶಗಳನ್ನ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದರು.
ಮನಸ್ಥಿತಿ ಬದಲಾಗಿಲ್ಲ: ಹಿಂದೂಗಳನ್ನ ಕೊಲೆ ಮಾಡುವ ಎಸ್ಡಿಪಿಐ ಅವರ ಮನಸ್ಥಿತಿ ಬದಲಾಗಿಲ್ಲ. ಕೇರಳದಿಂದ, ಹೊರಗಡೆಯಿಂದ ಬಂದವರಿಂದಲೂ ಈ ರೀತಿ ಆಗುತ್ತಿದೆ. ನಮ್ಮ ಶಿವಮೊಗ್ಗದವರು ಶಾಂತಿ ಪ್ರಿಯರು. ಕೊಲೆ ಮಾಡುವಂತಹ ಬೆಳವಣಿಗೆ ಆಗಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದಾಗಲಿ ಆಗಬಾರದು. ಹಾಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದರು.
ಹಿಂದೂಗಳು ಎದ್ದರೆ ಅನ್ಯ ಕೋಮಿನ ಗೂಂಡಾಗಳು ಉಳಿಯಲ್ಲ: ಮುಸಲ್ಮಾನ ಹಿರಿಯರು ಶಾಂತಿ ಕಾಪಾಡಲು ಹಿಂದೆಲ್ಲಾ ಶ್ರಮಿಸಿದ್ದಾರೆ. ಈಗ ಮುಸಲ್ಮಾನ ಹಿರಿಯರು ನಿಮ್ಮ ಯುವಕರಿಗೆ ಬುದ್ಧಿವಾದ ಹೇಳಬೇಕು. ಇಲ್ಲದಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಮ್ಮ ಸರ್ಕಾರ ಶಾಂತಿ ಕಾಪಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ. ಎಲ್ಲ ಮುಸ್ಲಿಮರ ಮೇಲೂ ನಾನು ಆರೋಪ ಮಾಡಲ್ಲ.
ಆದರೆ, ಹಿಂದೂಗಳು ಅಶಕ್ತರಲ್ಲ. ಅವರು ಎದ್ದರೆ ಮತ್ತೊಂದು ಕೋಮಿನ ಗೂಂಡಾಗಳು ಉಳಿಯಲ್ಲ. ಮತ್ತೊಂದು ಕೋಮಿನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಈ ಗಲಭೆ ಹಿಂದೆ ಕಾಂಗ್ರೆಸ್ನವರು ಇದ್ದಾರೆ. ಹಾಗಾಗಿ ಗಲಭೆಯನ್ನು ಕಾಂಗ್ರೆಸ್ನವರು ಘಟನೆಯನ್ನು ಖಂಡಿಸುತ್ತಿಲ್ಲ ಎಂದು ಆರೋಪಿಸಿದರು.
ಕಾನೂನು ಸುವ್ಯವಸ್ಥೆ ವಿಫಲವಾಗಿಲ್ಲ: ಇದು ಕಾನೂನು ಸುವ್ಯವಸ್ಥೆಯ ವೈಫಲ್ಯ ಅಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರದ ಪರ ಈಶ್ವರಪ್ಪ ಬ್ಯಾಟಿಂಗ್ ಮಾಡಿದರು.
ಗಣೇಶ ಉತ್ಸವಕ್ಕೆ ಅಡ್ಡಿಪಡಿಸಿದರೆ ಹುಷಾರ್: ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದರೆ ಸರಿ ಇರಲ್ಲ. ನೀವು ನಿಮ್ಮ ಹಬ್ಬ ಮಾಡಲ್ವಾ?, ನಾವು ಬೆಂಬಲ ಕೊಡಲ್ವಾ?. ನಮ್ಮ ಹಬ್ಬದ ತಂಟೆಗೆ ಬರಬೇಡಿ ಎಂದು ಈಶ್ವರಪ್ಪ ನೇರವಾಗಿ ಎಚ್ಚರಿಕೆ ನೀಡಿದರು.
ಮಾಧುಸ್ವಾಮಿ ಹೇಳಿಕೆ ಖಂಡನೀಯ: ಸರ್ಕಾರ ನಡೀತಿಲ್ಲ ಮ್ಯಾನೇಜ್ ಮಾಡ್ತಿದೀವಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆಯನ್ನು ಈಶ್ವರಪ್ಪ ಖಂಡಿಸಿದ್ದಾರೆ. ಮಾಧುಸ್ವಾಮಿ ಹೇಳಿದ್ದು ತಪ್ಪು. ಅವರು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಅವರ ಜತೆ ನಾನು ವೈಯಕ್ತಿಕವಾಗಿ ಮಾತಾಡುತ್ತೇನೆ ಎಂದರು.
ನೆಹರು ಫೋಟೋ ಕೈ ಬಿಟ್ಟಿದ್ದಕ್ಕೆ ಸಮರ್ಥನೆ: ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಮಿಸ್ಸಿಂಗ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ದೇಶ ವಿಭಜನೆ ಮಾಡಿದ್ದು ನೆಹರು. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯಗೆ ಸರ್ದಾರ್ ಪಟೇಲ್, ಭಗತ್ ಸಿಂಗ್ ಬೇಕಿಲ್ಲ. ದೇಶ ತುಂಡು ಮಾಡಿದವರು ಅವರಿಗೆ ಬೇಕು. ಹಿಂದಿನ ಕಾಂಗ್ರೆಸ್ನಿಂದ ಸ್ವಾತಂತ್ರ್ಯ ಬಂತು. ಆ ಹಿಂದಿನ ಕಾಂಗ್ರೆಸ್ಗೆ ಈಗಿನವರು ಜಾತಿ ಲೇಪನ ಹಚ್ಚಿದ್ದಾರೆ. ಕುರುಬರಿಗೆ, ಒಕ್ಕಲಿಗರಿಗೆ ಜಾತಿ ಲೇಪನ ಹಚ್ಚಿದ್ದಾರೆ ಎಂದು ಆರೋಪಿಸಿದರು.
ಕಾರ್ಪೊರೇಟರ್ ವಿರುದ್ಧ ಕ್ರಮಕ್ಕೆ ಆಗ್ರಹ: ಸಾವರ್ಕರ್ ಬ್ಯಾನರ್ ಹರಿದು ಹಾಕಿದ್ದು, ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬರ ಪತಿ. ಪತ್ನಿ ಕಾಂಗ್ರೆಸ್ ಕಾರ್ಪೋರೇಟರ್. ಪತಿ ಎಸ್ಡಿಪಿಐ ಕಾರ್ಯಕರ್ತ. ಆದರೆ, ಈ ಕಾಂಗ್ರೆಸ್ನವರು ಮಾತ್ರ ಬಿಜೆಪಿಯವರು ಕೋಮುಗಲಭೆ ಸೃಷ್ಟಿಸುತ್ತಾರೆ ಎಂದು ಆರೋಪ ಮಾಡುತ್ತಾರೆ. ಆದರೆ, ಕೋಮು ಗಲಭೆ ಸೃಷ್ಟಿಸುತ್ತಿರುವವರು ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬರ ಪತಿ. ಅವನ ವಿರುದ್ಧ ನೀವು ಕ್ರಮ ತೆಗೆದುಕೊಳ್ಳಿ ನೋಡೋಣ ಎಂದು ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ.. ಪ್ರಮುಖ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್