ಬೆಂಗಳೂರು: ಗೋ ಹತ್ಯೆ ನಿಷೇಧದ ವಿಚಾರದಲ್ಲಿ ನಮ್ಮ ಪಕ್ಷದ ಕೋರ್ ಕಮಿಟಿ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ತರಬೇತಿ ಕಾರ್ಯಾಗಾರಕ್ಕೆ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದರು. ಪಕ್ಷದ ಯಾವುದೇ ನಿರ್ಧಾರ ಕೈಗೊಳ್ಳಲು ನಮ್ಮದೇ ಕೋರ್ ಕಮಿಟಿಯಿದೆ. ಕಮಿಟಿಯಲ್ಲಿ ಏನು ತೀರ್ಮಾನ ಮಾಡುತ್ತಾರೋ ಅದೇ ನಮ್ಮ ತೀರ್ಮಾನ. ಹೀಗಾಗಿ ಸದ್ಯ ಕೋರ್ ಕಮಿಟಿ ಮುಂದೆ ಗೋಹತ್ಯೆ ನಿಷೇಧದ ವಿಚಾರವನ್ನು ಇರಿಸಲಾಗುತ್ತದೆ. ಅಲ್ಲಿ ಕೈಗೊಳ್ಳುವ ತೀರ್ಮಾನವೇ ನಮ್ಮ ಒಮ್ಮತದ ತೀರ್ಮಾನವಾಗಲಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಗೋ ಹತ್ಯೆ ನಿಷೇಧ ಕಾಯಿದೆ ಈಗಾಗಲೇ ಇದೆ. ಕೆಲವು ವರ್ಗಗಳನ್ನು ಶೋಷಣೆ ಮಾಡುವುದಕ್ಕೆ ಈ ಕಾನೂನು ತರುತ್ತಿದ್ದಾರೆ. ಇದನ್ನು ನಾವು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ನಿಮಗೆ ತಿಳಿಸುತ್ತೇವೆ ಎಂದರು.