ಬೆಂಗಳೂರು : ಯಡಿಯೂರಪ್ಪ ತುಂಬಾ ಗಟ್ಟಿಗರು, ನಾಯಕತ್ವ ಬದಲಾವಣೆ ಅಷ್ಟು ಸುಲಭ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಓದಿ: COVID update: ರಾಜ್ಯದಲ್ಲಿಂದು 12,209 ಮಂದಿಗೆ ಕೊರೊನಾ ದೃಢ.. 320 ಸೋಂಕಿತರು ಬಲಿ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಗಟ್ಟಿಯಾಗಿದ್ದಾರೆ. ನಾಯಕತ್ವ ಬದಲಾವಣೆಯಲ್ಲಿ ಮೇಲ್ ನೋಟಕ್ಕೆ ನಡೆಯುತ್ತಿರುವ ನಾಟಕ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ಆಶಾ ಕಾರ್ಯಕರ್ತರಿಗೆ ದಿನಸಿ ಮತ್ತು ಸಹಾಯಧನ ವಿತರಿಸಿದರು.
ಯಡಿಯೂರಪ್ಪನವರ ಲೀಡರ್ಶಿಪ್ನಲ್ಲಿ ಚುನಾವಣೆ ನಡೆದಿದೆ. ಮೊನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಯಡಿಯೂರಪ್ಪನವರೇ ಇನ್ನೆರಡು ವರ್ಷ ಸಿಎಂ ಅಂತ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ ಎಂದರು.
ಅವರ ಪಕ್ಷದಲ್ಲಿ ಸಚಿವರ ನಡುವೆ ಹೊಂದಾಣಿಕೆ ಇಲ್ಲ, ಶಾಸಕಗಳಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಅಧಿಕಾರಿಗಳ ನಡುವೆ ಕಿತ್ತಾಟ ಹೆಚ್ಚಾಗಿದೆ ಎಂದರು. ಹೀಗೆ ಎಲ್ಲರ ಭಿನ್ನಾಭಿಪ್ರಾಯದಿಂದ ಆಡಳಿತ ಕುಸಿದಿದೆ. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಸುಲಭವಂತೂ ಅಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷ ನೂರು ಕೋಟಿ ಅನುದಾನದಲ್ಲಿ ಲಸಿಕೆ ನೀಡಲು ಸಿದ್ದವಿದ್ದರೂ ಸರ್ಕಾರ ಅನುಮತಿ ನೀಡದಿರುವುದು ಒಂದು ಕಡೆ. ಮತ್ತೊಂದೆಡೆ ಕೋವಿಡ್ ಲಸಿಕೆ ವಿತರಣೆ ಸಂದರ್ಭದಲ್ಲೂ ಬಿಜೆಪಿ ಮುಖಂಡರುಗಳು ರಾಜಕೀಯ ಮಾಡಿ ತಮ್ಮ ಕಾರ್ಯಕರ್ತರಿಗೆ ಲಸಿಕೆ ನೀಡಿ ಉಳಿದವರನ್ನು ದೂರವಿಡುತ್ತಿರುವುದರಿಂದ ಸಾರ್ವಜನಿಕರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಬಿದರಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ನಮ್ಮ ಪಕ್ಷದ ಮುಖಂಡರು ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ವತಿಯಿಂದ ಎರಡನೆ ಲಸಿಕಾ ಅಭಿಯಾನ ಎಂದು ತಿಳಿಸಿದರು.
ಇನ್ನು, ಬಿದರಹಳ್ಳಿ ಕಾಂಗ್ರೆಸ್ ಮುಖಂಡರು ಮಣಿಪಾಲ್ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡು ಮೂರು ಸಾವಿರ ಜನರಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಂಡು, ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಕೊರೊನಾ ವಾರಿಯರ್ಸ್‌ಗಳಾಗಿ ಬಿದರಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ದಿನಸಿ ಕಿಟ್ ಹಾಗೂ ಎರಡು ಸಾವಿರ ರೂ. ಗೌರವ ಧನ ನೀಡಿ ಗೌರವಿಸಲಾಗಿದೆ ಎಂದು ಬಿದರಹಳ್ಳಿ ಗ್ರಾಪಂ ಅಧ್ಯಕ್ಷ ವರುಣ್ ತಿಳಿಸಿದರು.
ಕೋವಿಡ್ ಲಸಿಕೆ ನೀಡುವಲ್ಲಿ ಸರ್ಕಾರ ಯಶಸ್ವಿಯಾಗದ ಕಾರಣ ಜನರು ಕಂಗಾಲಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದಿಂದ ಲಸಿಕೆ ವಿತರಣೆ ಮಾಡುತ್ತಿರುವುದರಿಂದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.