ಬೆಂಗಳೂರು: ಔರಾದ್ಕರ್ ವರದಿ ಜಾರಿಗೊಳಿಸಿ ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಬೇಕಿದ್ದ ನೀವು ಕ್ಷುಲ್ಲಕ ಕಾರಣಕ್ಕೆ ಸಣ್ಣಪುಟ್ಟ ರಾಜಕೀಯ ದ್ವೇಷಕ್ಕೆ ಮನಸ್ಸು ಕೊಟ್ಟು ವಿನಾ ಕಾರಣವಾಗಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರುವುದು ಖಂಡನೀಯ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ.
ಗೃಹ ಇಲಾಖೆಯನ್ನು ರಾಜಕೀಯ ಉದ್ದೇಶಕ್ಕೋಸ್ಕರ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಂಗಳೂರಿನಲ್ಲಿ ಹತ್ತಾರು ಗಂಭೀರ ಆರೋಪ ಹೊತ್ತು ಕೊಲೆ ಸುಲಿಗೆಯಲ್ಲಿ ಭಾಗಿಯಾಗಿದ್ದ 110 ಜನರ ವಿರುದ್ಧ ಹೂಡಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಅದೇ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಅತ್ಯಾಚಾರದಂತಹ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟುತ್ತಿರುವುದು ಖಂಡನೀಯ ಎಂದು ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ಅಧಿಕಾರಿ ಮಥಾಯಿ ಅವರ ವಿರುದ್ಧವೂ ಸರ್ಕಾರ ಸೇಡಿಗೆ ಬಿದ್ದಿದೆ. ನಾಲ್ಕು ವರ್ಷಗಳಿಂದ ಅವರಿಗೆ ವೇತನ ಬಡ್ತಿಯನ್ನೇ ಕೊಟ್ಟಿಲ್ಲ. ಅವರು ಮಾಡಿದ ತಪ್ಪಾದರೂ ಏನು? ಬಿಬಿಎಂಪಿಯಲ್ಲಿನ ಅವ್ಯವಹಾರವನ್ನು ಬಯಲಿಗೆಳೆದ್ರು. ಈಗ ಮಥಾಯಿ ನಿವೃತ್ತರಾದರೂ ಸರ್ಕಾರ ಸೇಡು ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿಗಳೇ ನಿಮ್ಮ ಪಂಚಕರ್ಮ ಚಿಕಿತ್ಸೆ ಪೂರ್ಣವಾಗಿದ್ದರೆ ಈಗಲಾದರೂ ರಾಜ್ಯದ ಕಡೆ ಗಮನ ಕೊಡಿ ಎಂದು ಒತ್ತಾಯಿಸಿದ್ದಾರೆ. ಬಿಜೆಪಿಗೆ ವೋಟ್ ಹಾಕಿದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಹಿಂದೆ ಬಿದ್ದಿದೆ ಎಂದು ಸಚಿವ ರೇವಣ್ಣ ಹೇಳಿಕೆ ನೀಡಿರುವುದು ಹುಚ್ಚುತನದ ಪರಮಾವಧಿ. ಮುಖ್ಯಮಂತ್ರಿಗಳು ಆ ಸಚಿವರನ್ನು ಕರೆದು ಬುದ್ಧಿ ಹೇಳಬೇಕು ಎಂದು ಆಗ್ರಹಿಸಿದ್ದಾರೆ.