ಬೆಂಗಳೂರು: ಭಕ್ತರು ಅಂದ್ರೆ ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರು ಆಗಿರಬಹುದು, ಡಿ.ಕೆ.ಶಿವಕುಮಾರ್ ಕೂಡ ಆಗಿರಬಹುದು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರಿಗೆ ನೂರಾರು ಕೋಟಿ ಬೆಲೆ ಬಾಳುವ ದೇವಸ್ಥಾನಗಳನ್ನು ಹಸ್ತಾಂತರಿಸುವ ಅಜೆಂಡಾ ಹೊಂದಿದೆ ಎಂಬ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ಭಕ್ತರು ಅಂದ್ರೆ ಎಲ್ಲರೂ ಬರುತ್ತಾರೆ. ನಾವು ಭಕ್ತರಿಗೆ ಕೊಡಬೇಕು ಅಂತ ಆಲೋಚಿಸಿದ್ದೇವೆ. ಈ ಕುರಿತಾಗಿ ಇನ್ನೂ ಮಾರ್ಗಸೂಚಿ ಸಿದ್ಧಪಡಿಸಿಲ್ಲ. ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ತಪ್ಪಿಸಿ ಭಕ್ತರ ಕೈಗೆ ನೀಡಬೇಕು ಎಂಬುದು ನಮ್ಮ ಚಿಂತನೆ ಎಂದರು.
ಕುಂದಾಪುರ ಕೊರಗ ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಉಡುಪಿ ಜಿಲ್ಲೆಯ ಕೋಟಾದಲ್ಲಿ ಗಿರಿಜನರ ಮೇಲೆ ಪೊಲೀಸರು ವಿನಾಕಾರಣ ಹಲ್ಲೆ ಮಾಡಿದ್ದರು. ಒಬ್ಬ ಪಿಎಸ್‌ಐ ಸಸ್ಪೆಂಡ್ ಆದರೂ, ಆರು ಜನರನ್ನು ವರ್ಗಾವಣೆ ಕೂಡ ಮಾಡಲಾಗಿದೆ. ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಎಸ್‌ಪಿ ಮತ್ತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೆ. ಈ ಮಧ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು. ಒಬ್ಬ ಕಾನ್ಸ್ಟೇಬಲ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದಿವಾಸಿ ಕೇರಿಯಲ್ಲಿ ಆತಂಕ ಸೃಷ್ಟಿಯಾಗಿತ್ತು ಎಂದು ವಿವರಿಸಿದರು.
ಇದನ್ನೂ ಓದಿ: ಕುಂದಾಪುರ ಕೊರಗ ಸಮುದಾಯದ ಮೇಲಿನ ಪೊಲೀಸ್ ಪ್ರಕರಣ ಯೋಜಿತ ಸಂಚು: ಸಿದ್ದರಾಮಯ್ಯ
ಈ ಪ್ರಕರಣದ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದ್ಧೇನೆ. ಅಲ್ಲಿರುವ ಪರಿಸ್ಥಿತಿಯನ್ನು ಗೃಹಸಚಿವರಿಗೆ ವಿವರಿಸಿದ್ದೇನೆ. ಯಾವುದೇ ಕಾರಣಕ್ಕೂ ಅಲ್ಲಿರುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಎಸ್‌ಪಿ ಅವರಿಗೆ ಕರೆ ಮಾಡಿ ಕಾನೂನು ಪ್ರಕಾರ ದೂರು ದಾಖಲಿಸಲು ಸೂಚಿಸಿದ್ದೇನೆ. ದಲಿತರಿಗೆ ಯಾವುದೇ ತೊಂದರೆಯಾಗದಂತೆ ಗೃಹ ಸಚಿವರು ಸೂಚಿಸಿದ್ದಾರೆ. ಕೊರಗರು, ಗಿರಿ ಜನರು, ದಲಿತ ಬಂಧುಗಳಿಗೆ ಭಯ ಪಡುವ ಅವಶ್ಯಕತೆ ಇಲ್ಲ. ನಾನು, ಗೃಹ ಸಚಿವರು, ಸರ್ಕಾರ ನಿಮ್ಮ ಜೊತೆ ಇದೆ. ಏನಾದರೂ ಇದ್ರೆ ಸಿಎಂಗೂ ಮಾಹಿತಿ ನೀಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.