ಬೆಂಗಳೂರು: ಬಿಜೆಪಿ ನಡೆಸಿದ್ದ ಆಪರೇಷನ್ ಕಮಲದಲ್ಲಿ ಹಣ ಪಡೆದುಕೊಂಡು ವಾಪಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕ ಶ್ರೀನಿವಾಸ ಗೌಡ ಕೊನೆಗೂ ಎಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.
ಹಲವು ಬಾರಿ ನೋಟಿಸ್ ನೀಡಿದ್ದರೂ ಶಾಸಕ ಶ್ರೀನಿವಾಸ ಗೌಡ ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದೂ ಕೂಡ ಗೈರಾಗಿದ್ದರೆ, ಅರೆಸ್ಟ್ ವಾರೆಂಟ್ ಹೊರಡಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ತನಿಖಾಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದಾರೆ.
ಆಪರೇಷನ್ ಕಮಲದಲ್ಲಿ ತಮಗೆ 50 ಕೋಟಿ ಬೇಡಿಕೆ ಇಟ್ಟು ಪಕ್ಷ ಬಿಡುವಂತೆ ಹೇಳಿದ್ದರು. ಅಲ್ಲದೆ ಈ ಪೈಕಿ 5 ಕೋಟಿ ರೂ. ಮುಂಗಡವಾಗಿ ಕೊಟ್ಟಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದರು. 5 ಕೋಟಿ ರೂ. ಹಣ ಪಡೆದ ಆರೋಪದಡಿ, ಶಾಸಕರ ವಿರುದ್ಧ ಲಂಚ ಮುಕ್ತ ಕರ್ನಾಟಕ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.