ಬೆಂಗಳೂರು: ಚಲಿಸುತ್ತಿದ್ದ ಬಸ್ನಲ್ಲಿ ಚಲನಚಿತ್ರದಿಂದ ಪ್ರೇರಣೆಗೊಂಡು ಯುವತಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಳ್ಳಾರಿ ಮೂಲದ ಮಧುಸೂದನ್‍ರೆಡ್ಡಿ (25) ಎಂದು ತಿಳಿದುಬಂದಿದೆ. ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ವಿಜಯನಗರದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರಿ-ಗಣೇಶ ಹಬ್ಬಕ್ಕೆಂದು ತಮ್ಮೂರು ಬಳ್ಳಾರಿಗೆ ತೆರಳಿದ್ದ ವಿದ್ಯಾರ್ಥಿನಿ ಕೆಎಸ್‌ಆರ್‌ಟಿಸಿ ಸ್ಲೀಪರ್ ಎಸಿ ಬಸ್ನಲ್ಲಿ ಬೆಂಗಳೂರಿಗೆ ಬರುತ್ತಿದ್ದಳು. ಈ ವೇಳೆ ಪಕ್ಕದ ಸೀಟ್ನಲ್ಲೇ ಕುಳಿತು ತೆಲುಗು ಸಿನಿಮಾ ನೋಡುತ್ತಿದ್ದ ಯುವಕ ಸೆ.13 ರ ಬೆಳಿಗ್ಗೆ ಬಸ್ಸಿನಿಂದ ಇಳಿಯುವಾಗ ಕುಳಿತಿದ್ದ ಯುವತಿಗೆ ಮುತ್ತಿಟ್ಟು ಬಸ್‌ನಿಂದ ಇಳಿದು ಹೋಗಿದ್ದ.
ಯುವತಿಯು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಂತಿಮ ವರ್ಷದ ಆರ್ಕಿಟೆಕ್ಟರ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354A, 354ರಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ತನಿಖೆ ಕೈಗೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಸೆ.12 ರಂದು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಸ್‍ಗೆ ಯಾರೆಲ್ಲ ಹತ್ತಿದ್ದರು ಎಂಬುದರ ಬಗ್ಗೆ ಸಿಸಿ ಕ್ಯಾಮರಾ ಮತ್ತು ಬಸ್ ಟಿಕೆಟ್ ಪರಿಶೀಲನೆ ನಡೆಸಿದಾಗ ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ಯುವತಿ ಸಹ ಗುರುತು ಹಿಡಿದಿದ್ದಳು. ಈ ಆಧಾರದ ಮೇಲೆ ಬೆನ್ನತ್ತಿದ್ದಾಗ ವಿಜಯನಗರದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ನೋಡಿ ಪಕ್ಕದ ಸೀಟಿನಲ್ಲಿದ್ದ ಯುವತಿಗೆ ಚುಂಬಿಸಿ ಬಸ್‌ನಿಂದಿಳಿದು ಹೋದ ಯುವಕ!