ದೇವನಹಳ್ಳಿ: ಬೆಂಗಳೂರಿನ ಮೆಜೆಸ್ಟಿಕ್ನಿಂದ ಟ್ರಾಫಿಕ್ ಮಧ್ಯೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಸರಿಸುಮಾರು ಒಂದೂವರೆ ತಾಸು ಬೇಕೇಬೇಕು. ಆದರೆ ಕೇವಲ 10 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಬಹುದು!
ಹೌದು, ಭವಿಷ್ಯದ ಸಾರಿಗೆಯಾಗಿರುವ ಸೂಪರ್ ಹೈಸ್ಪೀಡ್ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಡೆಯಲಿದೆ. ಸೂಪರ್ ಹೈಸ್ಪೀಡ್ ಹೈಪರ್‌ಲೂಪ್ ಸಾರಿಗೆ ಮೂಲಕ ಕೆಂಪೇಗೌಡ ಏರ್ಪೋರ್ಟ್ಅನ್ನು (ಕೆಐಎ) ನಗರದ ಕೇಂದ್ರ ಭಾಗ ಮೆಜೆಸ್ಟಿಕ್ಗೆ ಸಂಪರ್ಕಿಸುವ ಒಪ್ಪಂದಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಮತ್ತು ವರ್ಜಿನ್ ಹೈಪರ್‌ಲೂಪ್ ಕಂಪನಿ ಸಹಿ ಹಾಕಿವೆ. ಇದು ಕಾರ್ಯರೂಪಕ್ಕೆ ಬಂದ್ರೆ ಮೆಜೆಸ್ಟಿಕ್ನಿಂದ ಕೇವಲ 10 ನಿಮಿಷದಲ್ಲಿ ಏರ್ಪೋರ್ಟ್ ತಲುಪಬಹುದು.
ಕೆಐಎಎಲ್ಗೆ ಭವಿಷ್ಯದ ಸಾರಿಗೆ ಹೈಪರ್ ಲೂಪ್ ವಿಶ್ವದ ಏಕೈಕ ಹೈಪರ್ ಲೂಪ್ ಕಂಪನಿಯಾದ ವರ್ಜಿನ್ ಹೈಪರ್ ಲೂಪ್ ಮತ್ತು ಡಿಪಿ ವರ್ಲ್ಡ್ ಅಧ್ಯಕ್ಷ ಸುಲ್ತಾನ್ ಬಿನ್ ಸುಲೇಮಾನ್ ಮತ್ತು ಕೆಐಎ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ವಿಜಯ ಭಾಸ್ಕರ್ ಅವರು ಆನ್ಲೈನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಕೆಐಎಎಲ್ಗೆ ಭವಿಷ್ಯದ ಸಾರಿಗೆ ಹೈಪರ್ ಲೂಪ್ ಒಂದು ವೇಳೆ ಈ ಹೈಪರ್ ಲೂಪ್ ಯೋಜನೆ ಕಾರ್ಯರೂಪಕ್ಕೆ ಬಂದರೆ ಬೆಂಗಳೂರಿನ ಮೆಜೆಸ್ಟಿಕ್ನಿಂದ ದೇವನಹಳ್ಳಿಯ ಏರ್ಪೋರ್ಟ್ಗೆ ಕೇವಲ 10 ನಿಮಿಷದಲ್ಲಿ ತಲುಪಬಹುದು. ಗಂಟೆಗೆ 1,080 ಕಿ.ಮೀ ವೇಗದ ಹೈಪರ್ ಲೂಪ್ ವಿಮಾನಕ್ಕಿಂತ ವೇಗವಾಗಿ ಸಂಚರಿಸುತ್ತದೆ. ತಲಾ 6 ತಿಂಗಳಂತೆ ಎರಡು ಹಂತದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಾರಿಡಾರ್ ನಿರ್ಮಾಣದ ವೇಳೆ ಆಗಬಹುದಾದ ತಾಂತ್ರಿಕ, ಆರ್ಥಿಕ ಮತ್ತು ಮಾರ್ಗ ಸೌಲಭ್ಯಗಳ ಬಗ್ಗೆ ಅಧ್ಯಯನ ನಡೆಸಲು ಚಿಂತಿಸಲಾಗಿದೆ. ಬೆಂಗಳೂರಿನ ಸಂಚಾರ ದಟ್ಟನೆ ನಿಭಾಯಿಸಲು ಮತ್ತು ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಹೈಪರ್ ಲೂಪ್ ಒಂದು ಉತ್ತಮ ಮಾರ್ಗವಾಗಿದೆ. ಕೇವಲ ಪ್ರಯಾಣಿಕರ ಸಂಚಾರವಲ್ಲದೆ ವಿಮಾನ ನಿಲ್ದಾಣದ ಸರಕುಗಳನ್ನ ಸಾಗಿಸಲು ಹೈಪರ್ ಲೂಪ್ ಉಪಯುಕ್ತವಾಗಲಿದೆ. ಈ ಹಿನ್ನೆಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಖುಷಿಯಾಗಿದೆ ಎಂದು ವರ್ಜಿನ್ ಸಂಸ್ಥೆಯ ಸುಲ್ತಾನ್ ಬಿನ್ ಸುಲೇಮಾನ್ ತಿಳಿಸಿದರು. ಬೆಂಗಳೂರು ವಿಮಾನ ನಿಲ್ದಾಣವನ್ನ ಸಾರಿಗೆ ಕೇಂದ್ರವನ್ನಾಗಿಸಿ ಭಾರತದ ಹೆಬ್ಬಾಗಿಲನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಕರ್ನಾಟಕ ರಾಜ್ಯ ಮತ್ತು ಈ ಪ್ರದೇಶದ ಆರ್ಥಿಕ ಬೆಳವಣಿಗೆ ಬಗ್ಗೆ ಬಹಳ ಉತ್ಸಾಹ ಹೊಂದಿದ್ದೇವೆ. ವಿಶ್ವ ದರ್ಜೆಯ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ತಾಂತ್ರಿಕ ಆವಿಷ್ಕಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಈ ಅಧ್ಯಯನ ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆ ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲಿದೆ ಎಂದು ಬಿಐಎಎಲ್ನ ಸಿಇಓ ಹರಿದು ಮರಾರ್ ಹೇಳಿದರು.