ಬೆಂಗಳೂರು: ಆಪರೇಷನ್ ಕಮಲದ ಪ್ರಮುಖ ರೂವಾರಿ ಹಾಗೂ ಮುಂದಾಳಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು ತಾವೇ ಗಾಜಿನ ಮನೆಯಲ್ಲಿದ್ದು, ಬೇರೆಯವರ ಮನೆಗೆ ಕಲ್ಲು ತೂರುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಕೆಂಗಲ್ ಶ್ರೀಪಾದ ರೇಣು ತಿಳಿಸಿದ್ದಾರೆ.
ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಡಿ ಕೆ ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಡಿಸಿಎಂ ಡಾ ಅಶ್ವಥ್ ನಾರಾಯಣ್ ಅವರಿಗೆ ಮಾಧ್ಯಮ ಪ್ರಕಟಣೆ ಮೂಲಕ ಶ್ರೀಪಾದ ರೇಣು ತಿರುಗೇಟು ನೀಡಿದ್ದಾರೆ. 17 ಜನ ಅನರ್ಹ ಶಾಸಕರನ್ನು ಮುಂಬೈ ಪಂಚತಾರಾ ಹೋಟೇಲ್ನಲ್ಲಿ ತಿಂಗಳುಗಟ್ಟಲೇ ಇಡಲು ಹಾಗೂ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹಣ ಎಲ್ಲಿಂದ ಬಂತು? ಇದಕ್ಕೆ ಆದ ಖರ್ಚುಗಳ ಬಗ್ಗೆ ದಾಖಲೆಯನ್ನು ನೀಡಿ ಎಂದು ಆಗ್ರಹಿಸಿದ್ದಾರೆ.
ಅಶ್ವಥ್ ನಾರಾಯಣ್ ಅವರು ಕೇವಲ 8 ವರ್ಷಗಳ ಅವಧಿಯಲ್ಲಿ ತಮ್ಮ ಆಸ್ತಿಯಲ್ಲಿ ಇಷ್ಟು ಹೆಚ್ಚಳವಾಗಿರುವುದರ ಬಗ್ಗೆ ಸರಿಯಾದ ದಾಖಲೆಗಳನ್ನ ನೀಡಬೇಕು ಎಂದು ಆಗ್ರಹಿಸಿರುವ ಅವರು, ತಾವು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಕಡತಗಳಿಗೆ ಬೆಂಕಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನುವುದರ ಬಗ್ಗೆ ನೆನಪಿಸಿಕೊಳ್ಳಬೇಕು ಎಂದಿದ್ದಾರೆ.
ಅಭಿವೃದ್ಧಿಗೆ ಗಮನ ನೀಡಿ:
ಇಂತಹ ಹೇಳಿಕೆಗಳನ್ನು ನೀಡುವುದರ ಬದಲು ರಾಜ್ಯದ ಅಭಿವೃದ್ಧಿಯತ್ತ ಗಮನ ನೀಡಿ. ಕೇಂದ್ರ ಸರ್ಕಾರವು ಕಾಂಗ್ರೆಸ್ ನಾಯಕರನ್ನು ತನ್ನ ಅಧಿಕಾರ ಬಳಸಿ ತುಳಿಯುತ್ತಿರುವುದು ಎಲ್ಲರ ಗಮನಕ್ಕೆ ಬಂದ ವಿಚಾರವಾಗಿದೆ. ಕಾಲಚಕ್ರ ತಿರುಗುತ್ತಲೇ ಇದ್ದು, ಮೇಲೆ ಇದ್ದವರು ಕೆಳಗೆ ಬರಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವ ನಿಮ್ಮ ಹೇಳಿಕೆ ನಿಮಗೂ ಮುಂಬರುವ ಕಾಲಘಟ್ಟದಲ್ಲಿ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಕೆಂಗಲ್ ಶ್ರೀಪಾದ ರೇಣು ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಅಶ್ವಥ್ ನಾರಾಯಣ್ ವಿರುದ್ಧ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಅಂದು ಮೊದಲು ಅಭ್ಯರ್ಥಿ ಎಂದು ಘೋಷಿತವಾಗಿದ್ದ ಮಾಜಿ ಸಚಿವ ಎಂ.ಆರ್. ಸೀತಾರಾಂ ಕಣದಿಂದ ಹಿಂದೆ ಸರಿದಿದ್ದರಿಂದ ಕಡೆಯ ಕ್ಷಣದಲ್ಲಿ ಕೆಂಗಲ್ ಶ್ರೀಪಾದ ರೇಣು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ 54 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.