ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ 513 ನೇ ಜಯಂತಿ ಗೌರವಾರ್ಥ ಈ ವರ್ಷದಿಂದ ಸರ್ಕಾರವು ನೀಡುತ್ತಿರುವ 'ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಪರವಾಗಿ ಸುಧಾಮೂರ್ತಿ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಪರವಾಗಿ ವಿಮಲ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 513 ನೇ ಜಯಂತಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿರುವುದು ಅತೀವ ಸಂತಸ ತಂದಿದೆ. ಅದರ ಜೊತೆಗೆ ಐದು ಲಕ್ಷ ನಗದು ನೀಡಲಾಗಿದೆ. ಆ ಹಣವನ್ನು ನನಗೆ ವಿದ್ಯಾದಾನ ಮಾಡಿದ ಮೈಸೂರು ರಾಮಕೃಷ್ಣ ಆಶ್ರಮಕ್ಕೆ ನೀಡುವುದಾಗಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ಸಿಲಿಕಾನ್ ಹಬ್ಗಾಗಿ ಸ್ಪರ್ಧೆ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಕೆಂಪೇಗೌಡರ ಹೆಸರಿಗೆ ಅನುಮತಿ ನೀಡಿದವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಭಾರತದ ಸಿಲಿಕಾನ್ ಹಬ್ ಯಾವುದು ಆಗಬೇಕೆಂಬುದರ ಆ ಪೈಪೋಟಿ ಇತ್ತು. ಬೆಂಗಳೂರಿಗರ ಬದ್ಧತೆಯಿಂದ ಬೆಂಗಳೂರು ಭಾರತದ ಸಿಲಿಕಾನ್ ಹಬ್ ಆಯಿತು. ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಬೆಂಗಳೂರಿನಿಂದ ಹಿಂದಿರುಗಲಿಲ್ಲ ಎಂದು ಅವರ ಆಡಳಿತದ ದಿನಗಳನ್ನು ನೆನೆದರು.
ಅಮೆರಿಕದ ಅಂದಿನ ಅಧ್ಯಕ್ಷ ಒಬಾಮ ಬೆಂಗಳೂರು ಬಗ್ಗೆ ‘ನಮ್ಮ ಉದ್ಯೋಗವನ್ನು ಬೆಂಗಳೂರು ಪಡೆಯುತ್ತಿದೆ’ ಎಂದಿದ್ದರು. ಈ ಮಾತು ಹೇಳಲು ಅವರಲ್ಲಿ ದುಗುಡ ಇತ್ತು ಮತ್ತು ಶಹಬ್ಬಾಸ್ ಗಿರಿಯೂ ಕೂಡ ಇತ್ತು. ಹಾಗೇ ಮನಮೋಹನ್ ಸಿಂಗ್ ಅವರು ‘ದೇಶವನ್ನು ಬೆಂಗಳೂರು ಮೂಲಕ ನೋಡುತ್ತಿದ್ದೇವೆ’ ಎಂದು ಹೇಳಿದ್ದರು ಎಂದು ಸ್ಮರಿಸಿದರು.
ಎನ್.ಆರ್. ನಾರಾಯಣ ಮೂರ್ತಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಲೇಖಕಿ, ಇನ್ಫೋಸಿಸ್ನ ಸುಧಾಮೂರ್ತಿ ಅವರು ಮಾತನಾಡಿ, ಐಟಿ ಇರುವುದರಿಂದ ನಮ್ಮ ಮಕ್ಕಳಿಗೆ ಇಲ್ಲಯೇ ಕೆಲಸ ಸಿಕ್ಕಿದೆ. ಲಕ್ಷಾಂತರ ತಾಯಂದಿರು ನಮ್ಮ ಮಕ್ಕಳು ಕರ್ನಾಟಕದಲ್ಲಿಯೇ ಇರುತ್ತಾರೆ ಎಂದು ಸಂತೋಷ ಪಟ್ಟಿದ್ದಾರೆ ಎಂದರು.
ಇದೇ ವೇಳೆ ನಾರಾಯಣಮೂರ್ತಿಯವರ ಅನುಪಸ್ಥಿತಿಯಲ್ಲಿ ಅವರು ವಿಡಿಯೋ ಸಂದೇಶ ಕಳುಹಿಸಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಅದೇ ರೀತಿ ಪ್ರಕಾಶ್ ಪಡುಕೋಣೆ ಸಹ ವಿಡಿಯೋ ಸಂದೇಶದ ಮೂಲಕ ಮಾತನಾಡಿ, ಕೆಂಪೇಗೌಡ ಪ್ರಶಸ್ತಿ ಪಡೆದಿರುವ ನನಗೆ ಬಹಳ ಸಂತೋಷವಾಗಿದೆ. ಸರ್ಕಾರಕ್ಕೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ ಎಂದರು.
ಯಡಿಯೂರಪ್ಪ ನೆನೆದ ಸಚಿವ ಅಶ್ವತ್ಥನಾರಾಯಣ: ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಬೆಂಗಳೂರು ವಿಶ್ವದ ಪ್ರತಿಭೆಗಳ ನಗರ. ಏರೋಸ್ಪೇಸ್, ಐಟಿ, ಬಿಟಿ, ಸ್ಟಾರ್ಟ್ ಅಪ್ ಅತಿವೇಗವಾಗಿ ಬೆಳೆಯುತ್ತಿರುವ ನಗರವಿದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಲು 2008 ರಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದರು. ಅದಕ್ಕೆ ಅವಕಾಶ ಕೊಟ್ಟವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಎಂದು ಹೇಳಿದರು.
ಅಕ್ಟೋಬರ್ನಲ್ಲಿ ಪ್ರತಿಮೆ ಲೋಕಾರ್ಪಣೆ: ವಿಮಾನ ನಿಲ್ದಾಣದ ಮಧ್ಯದಲ್ಲೇ 108 ಅಡಿಯ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗುತ್ತಿದೆ. ಈ ಪ್ರತಿಮೆ ಅಕ್ಟೋಬರ್ನಲ್ಲಿ ಅದರ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು. ಮೂರು ದಿನ ಬೆಂಗಳೂರು ಹಬ್ಬ ನಡೆಯಲಿದೆ. ಅದರ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಡಾ. ನಿರ್ಮಲಾನಂದ ಮಹಾಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಸಿ ಎನ್ ಅಶ್ವತ್ಥ ನಾರಾಯಣ, ಆರ್ ಅಶೋಕ್, ಕೆ. ಗೋಪಾಲಯ್ಯ, ಸುನಿಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಮುನಿರತ್ನ, ರಾಜ್ಯಸಭೆ ಸದಸ್ಯ ಜಗ್ಗೇಶ್, ರಿಜ್ವಾನ್ ಅರ್ಷದ್, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕೃಷ್ಣಪ್ಪ ಮತ್ತಿತರರು ಇದ್ದರು.
ಇದನ್ನೂ ಓದಿ: 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ!