ಬೆಂಗಳೂರು: ನಗರದಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.
ಇಂದು ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿತ್ತು. ದಕ್ಷಿಣ ಒಳನಾಡಿನಲ್ಲಿಯೂ ಎಲ್ಲಾ ಕಡೆ ಮಳೆಯಾಗಿದ್ದು, ಹೊನ್ನಾವರದಲ್ಲಿ 14 ಸೆಂ.ಮೀ, ಗೋಕರ್ಣ 11, ಕದ್ರಾ 7 ಸೆಂ.ಮೀ, ಕುಂದಾಪುರ 7, ಹೊಸನಗರ 9 ಹಾಗೂ ಆಗುಂಬೆಯಲ್ಲಿ 8 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಸಿ. ಎಸ್. ಪಾಟೀಲ್ ತಿಳಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 11 ಹಾಗೂ 12 ರಂದು ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಆಗಸ್ಟ್ 13, 14, 15 ರಂದು ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗಬಹುದು. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನಲ್ಲಿ ಇಂದು ಬಹುತೇಕ ಎಲ್ಲಾ ಕಡೆ ಮಳೆಯಾಗಲಿದೆ. ನಾಳೆಯಿಂದ ಆಗಸ್ಟ್ 15 ರ ವರೆಗೆ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ಕೆಲವು ಕಡೆ ಮಾತ್ರ ಮಳೆಯಾಗಬಹುದು. ಇನ್ನು ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 11 ರಂದು ಬಹುತೇಕ ಎಲ್ಲಾ ಸ್ಥಳಗಳಲ್ಲಿ ಎಲ್ಲಾ ಕಡೆ ಮಳೆಯಾಗಲಿದ್ದು, ನಾಳೆಯಿಂದ 15 ರ ವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷಿಸಿರುವುದರಿಂದ ಎಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ.