ಬೆಂಗಳೂರು: ಈ ವರ್ಷ ಮಳೆ ನಿಲ್ಲುವ ಸೂಚನೆ ನೀಡುತ್ತಿಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿಯೂ ಅಕಾಲಿಕ ಮಳೆಯಾಗಿತ್ತು. ಜವಾದ್ ಚಂಡಮಾರುತದ ಪ್ರಭಾವ ರಾಜ್ಯದಲ್ಲಿ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗು, ಬಳ್ಳಾರಿ, ಚಾಮರಾಜನಗರ, ಶಿವಮೊಗ್ಗ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ವಿವಿಧ ಜಿಲ್ಲೆಗಳಲ್ಲಿ ಮಂಜು, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಅಂದಾಜಿಸಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದು ಮೋಡ ಕವಿದ ವಾತಾವರಣವಿತ್ತು. ಮಳೆಯ ಜೊತೆಗೆ ಉಷ್ಣಾಂಶ ಸಹ ಕುಸಿತವಾಗಿದ್ದು, ಚಳಿಯ ಅನುಭವವಾಗಲಿದೆ ಎಂದು ಇಲಾಖೆ ತಿಳಿಸಿದೆ. ಜೂನ್ ತಿಂಗಳಿನಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಈಗಲೂ ಮುಂದುವರಿದಿದೆ.
(ಇದನ್ನೂ ಓದಿ: ಆಕ್ಸಿಜನ್ ಕಿಟ್ ಧರಿಸಿಕೊಂಡೇ ಮತಗಟ್ಟೆಗೆ ಬಂದು ಮತ ಹಾಕಿದ ಗ್ರಾ.ಪಂ. ಸದಸ್ಯ!)