ಬೆಂಗಳೂರು: ಭಾರಿ ಕುತೂಹಲ ಮೂಡಿಸಿರುವ ರಾಜ್ಯ ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಮೂರು ವರ್ಷಗಳಿಂದ ಅಧ್ಯಕ್ಷರಿಲ್ಲದೆ ಆಡಳಿತಾಧಿಕಾರಿ ನೇತೃತ್ವದಲ್ಲಿ ಮುಂದುವರೆದಿದ್ದ ಒಕ್ಕಲಿಗ ಸಂಘಕ್ಕೆ ಇದೀಗ ಹೈಕೋರ್ಟ್ ಅನುಮತಿ ಮೇರೆಗೆ ಚುನಾವಣೆ ಆಯೋಜನೆ ಮಾಡಲಾಗಿದೆ. ಇಂದು ಬೆಳಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಸಂಜೆ 5ರ ವರೆಗೆ ನಡೆಯಲಿದೆ. ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಕಾರ್ಯಕಾರಿ ಸಮಿತಿಯ 35 ಸ್ಥಾನಗಳಿಗೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಇಂದು ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆ ಸೇರುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹೊಸೂರು ಹಾಗೂ ಕೃಷ್ಣಗಿರಿ ಕ್ಷೇತ್ರದಿಂದ 15 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಉಳಿದ 20 ಸ್ಥಾನಗಳು ಜಿಲ್ಲಾವಾರು ಆಯ್ಕೆ ನಡೆಯಬೇಕಿದೆ. ರಾಜ್ಯಾದ್ಯಂತ ಒಟ್ಟು 221 ಅಭ್ಯರ್ಥಿಗಳು ಕಣದಲ್ಲಿದ್ದು, 1,049 ಮತ ಕೇಂದ್ರಗಳಲ್ಲಿ 5,20,721 ಲಕ್ಷ ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ.
ಒಟ್ಟು ಜಿಲ್ಲೆಗಳು ಸೇರಿ 11 ಜಿಲ್ಲಾ ಕೇಂದ್ರಗಳನ್ನ ಮಾಡಲಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ 389 ಮತಗಟ್ಟೆಗಳಿದ್ದು, 1,97,125 ಮತದಾರರಿದ್ದಾರೆ. ನಗರದಲ್ಲಿ ಆಯ್ಕೆಯಾಗಬೇಕಿರುವ 15 ಸ್ಥಾನಗಳಿಗೆ 141 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಡಿಸೆಂಬರ್ 15 ಕ್ಕೆ ಫಲಿತಾಂಶ ಹೊರಬೀಳಲಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮತ ಎಣಿಕೆ ನಡೆಯಲಿದೆ.