ಬೆಂಗಳೂರು: ಮಾನಹಾನಿ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಸಚಿವರ ವಿರುದ್ಧ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್ ಮೊರೆ ಹೋಗಿರುವ ಸಚಿವರಿಗೆ ನಾವು ಪ್ರಶ್ನೆ ಕೇಳಲ್ಲ ಎಂದು ಹಠ ಹಿಡಿದ ಕಾಂಗ್ರೆಸ್ ಸದಸ್ಯರು, ತಾವು ಯಾಕೆ ಪ್ರಶ್ನೆ ಕೇಳಲ್ಲ ಎಂಬುದರ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿಗಳಿಗೆ ಒತ್ತಡ ಹೇರಿದರು. ಆದರೆ ಈ ವಿಚಾರ ಚರ್ಚೆಗೆ ಅವಕಾಶ ಇಲ್ಲ. ಪ್ರಶ್ನೆಗಳೇನಾದರು ಇದ್ದರೆ ಕೇಳಿ, ಇಲ್ಲದಿದ್ದರೆ ಬಿಡಿ ಎಂದು ತಿಳಿಸಿದ ಸಭಾಪತಿಗಳು ನಿಯಮದಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟ ಪಡಿಸಲು ಯತ್ನಿಸಿದರು.
ಒಂದಿಷ್ಟು ವಾಗ್ವಾದಗಳು ನಡೆದರೂ ಸಹ ಸಭಾಪತಿಗಳು ಸಚಿವರ ಸಿಡಿ ವಿಚಾರ ಹಾಗೂ ವಿಚಾರ ಚರ್ಚೆಗೆ ಅವಕಾಶ ಕೊಡಲಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕರು ಅವಕಾಶ ಸಿಗದ್ದಕ್ಕೆ ಬೇಸರಗೊಂಡು ಬಾವಿಗೆ ಇಳಿಯಲು ಸಹ ಮುಂದಾದರು. ಆದರೆ ಎಲ್ಲ ಸದಸ್ಯರನ್ನು ಸಹಮತ ಕಾಣದ ಹಿನ್ನೆಲೆಯಲ್ಲಿ ಹಾಗೂ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಪೂರ್ಣಮನಸ್ಸಿನಿಂದ ಹೋರಾಟಕ್ಕೆ ಮುಂದಾಗದ ಕಾರಣ ಸದಸ್ಯರು ಬಾವಿಗಿಳಿದು ನಿರ್ಧಾರ ವಾಪಸ್ ಪಡೆದರು.
ಗದ್ದಲದ ವಾತಾವರಣ
ಕಾಂಗ್ರೆಸ್ ಸದಸ್ಯ ಪ್ರಸನ್ನ ಕುಮಾರ್ ಪ್ರಶ್ನೋತ್ತರ ಅವಧಿಯಲ್ಲಿ ತಾವು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ಗೆ ಪ್ರಶ್ನೆ ಕೇಳುವುದಿಲ್ಲ. ಆರು ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯ ಮೊರೆ ಹೋಗಿದ್ದಾರೆ. ಇಂತಹ ಸಚಿವರಿಗೆ ನಾನು ಪ್ರಶ್ನೆ ಕೇಳುವುದಿಲ್ಲ. ಪ್ರಶ್ನೆ ಹೊರತು ಯಾವುದೇ ಮಾತನ್ನಾಡಿದರೂ ಕಡತಕ್ಕೆ ಹೋಗಲ್ಲ ಎಂದರು.
ಸಚಿವ ಬೈರತಿ ಬಸವರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ, ಇದಕ್ಕಾಗಿ ಪ್ರಶ್ನೆ ಬಹಿಷ್ಕರಿಸಿದ್ದೇನೆ ಎಂದರು. ಸದನದಲ್ಲಿ ಕಾರಣ ಹೇಳಬೇಡಿ ಎಂದು ಸಭಾಪತಿ ಹೇಳಿದ್ದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರಾದ ಬಸವರಾಜ್ ಇಟಗಿ ಸಹ ಪ್ರಶ್ನೆ ಬಹಿಷ್ಕರಿಸಿದರು. ಪ್ರತಿ ಸದಸ್ಯರೂ ಪ್ರಶ್ನೆ ಬಹಿಷ್ಕರಿಸಿದಾಗಲೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಡ ಹಾಕಿದರು.
ಪ್ರತಿ ಸಾರಿಯೂ ಗದ್ದಲ ನಿರ್ಮಾಣವಾಯಿತು. ಬಸವರಾಜ ಇಟಗಿ ಚರ್ಚೆಗೆ ಅವಕಾಶ ಸಿಗದ ಕಾರಣ ಸದಸ್ಯರು ಬಾವಿಗಿಳಿಯಲು ಮುಂದಾದರು. ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ನಾವು ಮಾತನಾಡಲು ಅವಕಾಶ ಕೊಡಬೇಕು ಎಂದು ಕೇಳಿದರು.ಪ್ರಶ್ನೆ ಕೇಳಲು ಅವಕಾಶ ಇದೆ, ಸಂಬಂಧಿಸದ ವಿಚಾರ ಪ್ರಸ್ತಾಪಕ್ಕೆ ಅವಕಾಶ ಇಲ್ಲ ಎಂದರು.
ಈ ನಡುವೆ ಮಾತನಾಡಿದ ಇಟಗಿ, ಕೋರ್ಟ್ ಮೊರೆ ಹೋದವರು ಸದನದಲ್ಲಿ ಇರಬಾರದು ಎಂದು ಆಗ್ರಹಿಸಿದರು. ಒಟ್ಟಾರೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯರು ಸಿಡಿ ವಿಚಾರ ಪ್ರಸ್ತಾಪದ ಮೂಲಕ ಗದ್ದಲವೆಬ್ಬಿಸುವ ಯತ್ನಕ್ಕೆ ಮುಂದಾದರಾದರೂ ಸಭಾಪತಿ ಬಸವರಾಜ್ ಹೊರಟ್ಟಿ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.