ಬೆಂಗಳೂರು: ಸಮುದಾಯದ ಪ್ರಗತಿಗೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕರ್ನಾಟಕ ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ವಜಾಗೊಳಿಸುವಂತೆ ಸವಿತಾ ಪೀಠ ಮಹಾಸಂಸ್ಥಾನ ಆಗ್ರಹಿಸಿದೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸವಿತಾನಂದನಾಥ ಸ್ವಾಮೀಜಿ, ನಿಗಮದ ಅಧ್ಯಕ್ಷ ಎನ್.ನರೇಶ್ ಕುಮಾರ್ ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ರೀತಿಯ ಪ್ರಗತಿ ಕಾರ್ಯಕ್ರಮಗಳನ್ನು ಮಾಡಿಲ್ಲ. ತಮ್ಮ ಆಡಳಿತಾವಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಇವರ ನಡತೆ, ಕಾರ್ಯ ವೈಖರಿಯಿಂದ ಸಮುದಾಯದ ಏಳಿಗೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರ ಹಿಂದುಳಿದ ಸವಿತಾ ಸಮಾಜದ ಅಭಿವೃದ್ಧಿಗಾಗಿ ದುಡಿಯುವ ನಾಯಕನ ಅಗತ್ಯವಿದೆ. ಆದರೆ, ಹಾಲಿ ಅಧ್ಯಕ್ಷ ಎನ್.ನರೇಶ್ ಕುಮಾರ್ ಇದುವರೆಗೆ ರಾಜ್ಯ ಪ್ರವಾಸ ಮಾಡಿಲ್ಲ. ಜನಾಂಗದ ಸಮಸ್ಯೆ ಕುರಿತು ಅರಿವು ಹೊಂದಿಲ್ಲ. ಹೀಗಾಗಿ, ಯಾವುದೇ ಕಾರಣಕ್ಕೂ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಬಾರದು ಎಂದು ಒತ್ತಾಯ ಮಾಡಿದರು.
ನಿಗಮದ ಅಧಿಕಾರ ದುರುಪಯೋಗ: ಕರ್ನಾಟಕ ರಾಜ್ಯ ಸವಿತಾ ಸಮಾಜ ಸಂಘದ ಚುನಾವಣೆ ಸಂಬಂಧ ನ್ಯಾಯಾಲಯದ ಆದೇಶ ಹೊರಬಿದ್ದಿದ್ದರೂ, ಚುನಾವಣೆ ಪ್ರಕ್ರಿಯೆ ನಡೆದಿಲ್ಲ. ಇದಕ್ಕೆ ಕೆಲ ನಾಯಕರ ಪಿತೂರಿಯೇ ಕಾರಣವಾಗಿದೆ. ಸೆಲೂನ್ ಸ್ಪಾ ಎಕ್ಸ್ಪೋ ಕಾರ್ಯಕ್ರಮವೂ ಖಾಸಗಿ ಸಹಭಾಗಿತ್ವದಲ್ಲಿ ನಡೆದರೂ, ಇದಕ್ಕೆ ನಿಗಮ ಪ್ರೋತ್ಸಾಹ ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ: ಸವಿತಾ ಸಮಾಜದಿಂದ ದಿವ್ಯಾಂಗ ಅನಾಥ ಮಕ್ಕಳಿಗೆ ಉಚಿತ ಕ್ಷೌರ ಸೇವೆ