ಬೆಂಗಳೂರು: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿಯಲ್ಲಿ ಹಗ್ಗ-ಜಗ್ಗಾಟ ಮುಂದುವರೆದಿದ್ದು, ನಾ ಕೊಡೆ, ನೀ ಬಿಡೆ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಗುರುವಾರ ತಡರಾತ್ರಿವರೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿದ್ದು, ಅನರ್ಹ ಶಾಸಕ ಆರ್. ಶಂಖರ್ ಅವರು ಪತ್ನಿ ಹಾಗೂ ಪುತ್ರನೊಂದಿಗೆ ಬಿಎಸ್ವೈ ನಿವಾಸಕ್ಕೆ ಆಗಮಿಸಿ ಟಿಕೆಟ್ ನೀಡಿವಂತೆ ಪಟ್ಟು ಹಿಡಿದರು. ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಂಪುಟದಲ್ಲಿ ಅವಕಾಶ ನೀಡುವ ಭರವಸೆ ಕೊಟ್ಟರೂ ಅದಕ್ಕೆ ಒಪ್ಪದೆ ಟಿಕೆಟ್ಗಾಗಿ ಲಾಬಿ ನಡೆಸಿದ್ದಾರೆ.
ಶಂಕರ್ ಪಟ್ಟಿನಿಂದ ವಿಚಲಿತರಾಗಿರುವ ಯಡಿಯೂರಪ್ಪ ಅವರು ಡಿಸಿಎಂ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಟಿಕೆಟ್ ನೀಡುವ ಕುರಿತು ಚರ್ಚಿಸುವ ಸಲುವಾಗಿ ಯಡಿಯೂರಪ್ಪ ಸಂಜೆ 6ಕ್ಕೆ (ಗುರುವಾರ) ನಿಗದಿಯಾಗಿದ್ದ ಮಕ್ಕಳ ಚಿತ್ರ ವೀಕ್ಷಣೆ ಕಾರ್ಯಕ್ರಮ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳ ಆರತಕ್ಷತೆಗೂ ಹೋಗಲಿಲ್ಲ. ತಡರಾತ್ರಿವರೆಗೂ ನಡೆಸಿದ ಸಿಎಂ ಟಿಕೆಟ್ ಯಾರಿಗೆ ಎನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಂಕರ್ ಅವರು ತನ್ನ ಪತ್ನಿ, ಪುತ್ರನನ್ನು ನಿವಾಸಕ್ಕೆ ಕರೆ ತಂದರೂ ಸಿಎಂ ಟಿಕೆಟ್ ನೀಡುವ ಭರವಸೆ ನೀಡಲಿಲ್ಲ. ಇದರಿಂದ ನಿರಾಸೆಗೊಂಡಿರುವ ಶಂಕರ್ ಬಿಜೆಪಿ ನಿಲುವಿಗೆ ತೀವ್ರ ಆಕ್ರೋಶಗೊಂಡಿದ್ದಾರೆ.
ಯಾವುದೇ ಕಾರಣಕ್ಕೂ ಶಂಕರ್ಗೆ ಟಿಕೆಟ್ ನೀಡಬಾರದು ಎಂಬ ಸಂದೇಶವನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸಲಾಗಿದೆ. ಶಂಕರ್ ಹೊರತುಪಡಿಸಿ ಬೇರೊಬ್ಬರಿಗೆ ಟಿಕೆಟ್ ಪಕ್ಕಾ ಆಗಿದೆ ಎಂದು ಬಿಜೆಪಿಯ ಆಪ್ತ ಮೂಲಗಳು ಖಚಿತಪಡಿಸಿವೆ.