ಬೆಂಗಳೂರು : ರಾಜ್ಯಾದ್ಯಂತ ಹಿಜಾಬ್ ತೀರ್ಪು ಬಗ್ಗೆ ಚರ್ಚೆಯಾಗುತ್ತಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದು ಹೀಗೆ : ವಿದ್ಯಾರ್ಥಿಗಳು ಆಯಾ ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಜ್ಯ ಹೈಕೋರ್ಟ್ ಸಮವಸ್ತ್ರದ ವಿಚಾರದಲ್ಲಿ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ. ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳಿಗೆ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು ಎಂದರು.
ಓದಿ:ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯ ಯಾವುದೂ ಇಲ್ಲ: 'ಹಿಜಾಬ್' ತೀರ್ಪಿನ ಬಗ್ಗೆ ಸಿಎಂ ಪ್ರತಿಕ್ರಿಯೆ
ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು. ಹಿಂದೆಂದೂ ಶಾಲಾ-ಕಾಲೇಜುಗಳಲ್ಲಿ ಇಂತಹ ವಿವಾದ ಕಂಡು ಬಂದಿರಲಿಲ್ಲ. ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಬೇಕೆಂದೇ ಈ ವಿವಾದವನ್ನು ಸೃಷ್ಟಿಸಿದ್ದವು. ನ್ಯಾಯಾಲಯವು ಈ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿ, ಸರಿಯಾದ ತೀರ್ಪು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಈ ತೀರ್ಪು ನೀಡಿದೆ ಎಂದರು.
ಈಶ್ವರಪ್ಪ ಅಭಿಪ್ರಾಯ : ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪನ್ನು ಸಂತೋಷದಿಂದ ಸ್ವಾಗತ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ಗೊಂದಲ ನಿವಾರಣೆ ಆಗುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಕೋರ್ಟ್ನ ತೀರ್ಪಿನ ಬಗ್ಗೆ ಎಲ್ಲರು ಬದ್ದವಾಗಿರಬೇಕು. ಸರ್ಕಾರದ ತೀರ್ಮಾನವನ್ನು ಕೋರ್ಟ್ ಎತ್ತಿ ಹಿಡಿದಿರುವುದು ಸಹ ಸ್ವಾಗತ ಮಾಡುತ್ತೇನೆ. ಕೋರ್ಟ್ ಮಧ್ಯಂತರ ತೀರ್ಪು ನೀಡಿತ್ತು. ಆ ತೀರ್ಪನ್ನು ಫಾಲೋ ಮಾಡಿದ್ರೆ ಈ ಗೊಂದಲ ಆಗ್ತಿರಲಿಲ್ಲ ಎಂದರು.
ಓದಿ: ಹೈಕೋರ್ಟ್ ತೀರ್ಪಿಗೆ ತಲೆ ಬಾಗಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ
ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಸಂಪುಟದಲ್ಲಿ ನಾಲ್ಕು ಸ್ಥಾನ ಖಾಲಿ ಇವೆ. ಸಿ.ಟಿ. ರವಿರವರು ಸಂಪುಟ ಪುನಾರಚನೆ ಆಗಬೇಕು ಎಂದು ಹೇಳಿದ್ದಾರೆ. ಅವರ ಹೇಳಿಕೆಗೆ ಸ್ವಾಗತ ಮಾಡುತ್ತೇನೆ. ನಮ್ಮ ಕೇಂದ್ರದ ನಾಯಕರು ಬಹಳ ಬುದ್ದಿವಂತರಿದ್ದಾರೆ. ಅದಕ್ಕೆ ಪಂಚರಾಜ್ಯ ಚುನಾವಣೆಯೇ ಸಾಕ್ಷಿಯಾಗಿದೆ. ಸಂಪುಟ ವಿಸ್ತರಣೆಯ ಬಗ್ಗೆ ಕೇಂದ್ರ ನಾಯಕರು ನಿರ್ಧಾರಿಸುತ್ತಾರೆ. ಅಭಿಪ್ರಾಯ ಹೇಳೋದು ತಪ್ಪಲ್ಲ. ಕೇಂದ್ರದ ನಾಯಕರ ತೀರ್ಮಾನಕ್ಕೆ ಬದ್ದ, ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದರು.
ಸುನೀಲ್ ಕುಮಾರ್ ಹೇಳಿಕೆ : ಹಿಜಾಬ್ ಪ್ರಕರಣದ ಸಂಬಂಧ ನ್ಯಾಯಾಲಯ ತೀರ್ಪು ಸ್ವಾಗತಾರ್ಹ. ಶಾಲೆಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ಪಕ್ಷ ಹಾಗೂ ಸರ್ಕಾರದ ನಿಲುವಾಗಿತ್ತು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಶಿಕ್ಷಣ ಹೊರತು ಪಡಿಸಿ ಉಳಿದ ಚಟುವಟಿಕೆಗಳಿಗೆ ಮಹತ್ವ ಕೊಡಬಾರದು ಎಂಬುದು ನಮ್ಮ ಆದ್ಯತೆ. ಧಾರ್ಮಿಕ ವಸ್ತ್ರ ಸಂಹಿತೆ ಕಾಲೇಜು ಹೊರಗೆ ಇರಬೇಕು. ಒಳಗಡೆ ಅವಕಾಶ ಇರಬಾರದು. ಇದನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬರುತ್ತಿದ್ದೇವೆ ಎಂದರು.
ಓದಿ: ಹಳ್ಳಿಯೊಂದರಲ್ಲಿ ಅವಿತಿರುವ ಉಗ್ರರು, ಭದ್ರತಾ ಪಡೆಗಳಿಂದ ಕಾರ್ಯಾಚರಣೆ
ಶಾಲೆಗಳಲ್ಲಿ ವಿವಾದ ಸೃಷ್ಟಿಯಾದಾಗ ಇದನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಯಾರೋ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರು. ಉದ್ದೇಶಿತ ಹಿತಾಸಕ್ತಿಗಳು ಇದರಲ್ಲಿ ಕೈ ಹಾಕಿ, ವಾತಾವರಣ ಕಲುಷಿತ ಮಾಡುವ ಪ್ರಯತ್ನ ಮಾಡಿದವು. ನ್ಯಾಯಾಲಯ ಒಳ್ಳೆಯ ತೀರ್ಪು ಕೊಟ್ಟಿದೆ ಎಂದರು.
ಶಾಲಾ ಆವರಣದಲ್ಲಿ ಶಿಕ್ಷಣ ಚಟುವಟಿಕೆಗಳನ್ನು ಇನ್ನಷ್ಟು ಉತ್ಕೃಷ್ಟವಾಗಿ ನಡೆಸಬೇಕು. ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಲು ಸರ್ಕಾರ ಮುಕ್ತವಾಗಿದೆ. ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಸರ್ಕಾರ ಎಲ್ಲ ರೀತಿಯಲ್ಲಿ ಕ್ರಮಕೈಗೊಳ್ಳುತ್ತದೆ ಎಂದರು.