ಬೆಂಗಳೂರು: ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಕೆಯಾಗಿದ್ದ ಚಾರ್ಜ್ ಶೀಟ್ಗೆ ತಡೆಯಾಜ್ಞೆ ನೀಡಲಾಗಿದೆ.
ಜನವರಿ ಹಾಗೂ ಫೆಬ್ರುವರಿ ತಿಂಗಳಲ್ಲಿ ಎರಡು ಹಂತಗಳಲ್ಲಿ ತಲಾ ಐದು ದಿನ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಚಾರಣೆಗೂ ತೆರಳಿದ್ದರು. ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಸಲ್ಲಿಕೆಯಾಗಿದ್ದ ಚಾರ್ಜ್ ಶೀಟ್ಗೆ ತಡೆಯಾಜ್ಞೆ ನೀಡಿ, ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಈ ವರ್ಷ ಜನವರಿಯಲ್ಲಿ ಕಾವೇರಿ ನದಿಯ ಜಲಾನಯನ ಜಿಲ್ಲೆಗಳಾದ್ಯಂತ 10 ದಿನಗಳ ಪಾದಯಾತ್ರೆ ನಡೆಸಲಾಗಿತ್ತು. ಈ ಸಂದರ್ಭ ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲನೆ ಆಗಲಿಲ್ಲ ಎಂದು ಆರೋಪಿಸಿ ದೂರು ಸಲ್ಲಿಸಲಾಗಿತ್ತು. ಕಾಂಗ್ರೆಸ್ ನಾಯಕರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಸಾಂಕ್ರಾಮಿಕ ರೋಗ ಕಾಯ್ದೆಯ ನಿಬಂಧನೆಗಳ ಅನ್ವಯ ಅಗತ್ಯ ಅಧಿಸೂಚನೆಗಳಿಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದರ ಹೊರತಾಗಿ, ಚಾರ್ಜ್‌ಶೀಟ್/ಪ್ರಾಸಿಕ್ಯೂಷನ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಮಾರ್ಗಸೂಚಿಗಳನ್ನು ಅವಲಂಬಿಸಿದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಯಡಿ ಕಾನೂನು ಬಾಹಿರವಾಗಿದೆ. ಪಾದಯಾತ್ರೆಗೆ ರಾಜ್ಯದ ಏಜೆನ್ಸಿಗಳು ಅನುಮತಿ ನೀಡಿವೆ ಎಂದು ತೋರಿಸಲು ಸಾಕಷ್ಟು ವಸ್ತುಗಳಿವೆ ಎಂದು ವಾದಿಸಲಾಯಿತು. ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ನ್ಯಾಯಾಲಯ ಚಾರ್ಜ್ ಶೀಟ್ಗೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ಜುಲೈ 4ಕ್ಕೆ ಆಂಧ್ರಕ್ಕೆ ಪ್ರಧಾನಿ ಮೋದಿ ಭೇಟಿ: ನಟ ಚಿರಂಜೀವಿಗೆ ಪ್ರತ್ಯೇಕ ಆಹ್ವಾನ