ಬೆಂಗಳೂರು: ಹೈಕೋರ್ಟ್ ಸಂಕೀರ್ಣದ ತಳಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸಲು ನಗರದ ಇಂಧನ ಭವನದಲ್ಲಿ ಒದಗಿಸಲಾಗುವ ನಿರ್ದಿಷ್ಟ ಜಾಗದ ಬಗ್ಗೆ 4 ವಾರಗಳಲ್ಲಿ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಉಚ್ಚ ನ್ಯಾಯಾಲಯದ ಪ್ರಧಾನ ಪೀಠದ ಸಂಕೀರ್ಣದ ತಳಮಹಡಿಯಲ್ಲಿರುವ ಎಲ್ಲ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಗೊಳಿಸುವಂತೆ ಕೋರಿ ತುಮಕೂರಿನ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ರಿಜಿಸ್ಟ್ರಾರ್ ಜನರಲ್ ಪರ ವಕೀಲರು, ಸದ್ಯ ಹೈಕೋರ್ಟ್ ತಳಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನೆಲಮಹಡಿಯಲ್ಲಿರುವ 6 ಹಾಗೂ 8ನೇ ಕೊಠಡಿಗಳನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.
ಆನಂದ ರಾವ್ ವೃತ್ತದ ಬಳಿಯ ಇಂಧನ ಭವನದಲ್ಲಿ ಹೆಚ್ಚುವರಿ ಜಾಗ ಒದಗಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಜಾಗ ನೀಡುವುದಾಗಿ ಸರ್ಕಾರ ತಿಳಿಸಿದೆ. ಇಂಧನ ಭವನದಲ್ಲಿ ಗುರುತಿಸಲಾಗಿರುವ ನಿಖರ ಸ್ಥಳದ ಮಾಹಿತಿ ಒದಗಿಸುವಂತೆ ಹೈಕೋರ್ಟ್ ಕಟ್ಟಡ ಸಮಿತಿ ಕೇಳಿದ್ದು, ಈ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆಯಬೇಕಿದೆ ಎಂದು ತಿಳಿಸಿದರು.
ಹೇಳಿಕೆ ಪರಿಗಣಿಸಿದ ಪೀಠ, ಹೈಕೋರ್ಟ್ ಕಚೇರಿಗಳನ್ನು ಸ್ಥಳಾಂತರಿಸಲು ಇಂಧನ ಭವನದಲ್ಲಿ ಒದಗಿಸಲಾಗುವ ನಿರ್ದಿಷ್ಟ ಜಾಗದ ಬಗ್ಗೆ 4 ವಾರಗಳ ಒಳಗೆ ಮಾಹಿತಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.