ಬೆಂಗಳೂರು: Norovirus.. ಕೋವಿಡ್-19 ವೈರಸ್ ಮಾರಣಾಂತಿಕ ಕಾಯಿಲೆ ಮಧ್ಯೆಯೇ ನೆರೆಯ ರಾಜ್ಯ ಕೇರಳದಲ್ಲಿ ನೋರೋ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಕೇರಳ ರಾಜ್ಯದ ವಯನಾಡಿನಲ್ಲಿ 13 ಜನರಲ್ಲಿ ನೋರೋ ವೈರಸ್ ಕಾಣಿಸಿಕೊಂಡಿದ್ದು, ರಾಜ್ಯದಲ್ಲೂ ಕೂಡ ನೋರೋ ವೈರಸ್ ಕುರಿತು ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ. ಮುಖ್ಯವಾಗಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.
ಈ ಸೋಂಕು ಸಾಮಾನ್ಯವಾಗಿ ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಇದರಿಂದ ವಾಂತಿ, ಭೇದಿ, ವಾಕರಿಕೆ ಮತ್ತು ಹೊಟ್ಟೆ ನೋವು , ತಲೆನೋವು, ಮೈ ಕೈ ನೋವು ಮತ್ತು ಜ್ವರದಂತಹ ಸಾಧಾರಣ ಲಕ್ಷಣಗಳು ಕಂಡುಬರುತ್ತದೆ. ಹೀಗಾಗಿ, ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಕೇರಳ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಅನುಸರಿಸಬೇಕಾದ ಕೆಲವು ಮುಂಜಾಗ್ರತಾ ಕ್ರಮಗಳು ಹೀಗಿವೆ.
1.Norovirus: ನೋರೋ ವೈರಸ್ ಸೋಂಕು ಕಾಲರಾದಂತೆ ತೀವ್ರ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣವಾಗುತ್ತದೆ. ತಕ್ಷಣ ಆಸ್ಪತ್ರೆಗೆ ನೊಂದಾಯಿಸುವುದು ಮತ್ತು ಅತಿಸಾರ ಭೇದಿಗೆ ನೀಡಲಾಗುವ ಚಿಕಿತ್ಸೆಯನ್ನು ನೀಡಬೇಕು, ಇಲ್ಲದಿದ್ದಲ್ಲಿ ಮಾರಣಾಂತಿಕವಾಗಲಿದೆ.
2. ಈ ವೈರಸ್‌ಗೆ ಚಿಕಿತ್ಸೆ 'ನಾನ್ ಸ್ಪೆಸಿಪಿಕ್' ಆಗಿದ್ದು, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು.
3. ಜಿಲ್ಲೆಗೆ ಒಬ್ಬ 'ಫಿಸಿಷಿಯನ್' ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ಸೂಕ್ತ ನಿರ್ವಹಣೆ ಮಾಡಲು ತಿಳಿಸುವುದು. ಸದರಿಯವರ ಹೆಸರು ಮತ್ತು ದೂರವಾಣಿಗಳನ್ನು ಸಹ ನಿರ್ದೇಶಕರ ಗಮನಕ್ಕೆ ತರುವುದು.
4. ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಈ ಸೋಂಕಿನ ನಿರ್ವಹಣೆಯ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.
5. ಎಲ್ಲ ಕುಡಿಯುವ ನೀರಿನ ಮೂಲಗಳ ಮಾಹಿತಿಯನ್ನು ಕಲೆ ಹಾಕುವುದು ಹಾಗೂ ಎಲ್ಲ ಮೂಲಗಳಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವುದು.
6. ಕುಡಿಯಲು ಯೋಗ್ಯವಿಲ್ಲ ಎಂದು ದೃಢಪಟ್ಟ ನೀರಿನ ಮೂಲಗಳನ್ನು ತಪ್ಪದೇ ಕ್ಲೋರಿನೇಷನ್ ಮಾಡಿಸುವುದು.
7. ಕ್ಲೋರಿನೇಷನ್ ಮಾಡಿರುವ ನೀರಿನಲ್ಲಿ ನಿರೀಕ್ಷೆಯ ಮಟ್ಟದಲ್ಲಿ (0.2-0.2 ಪಿಪಿಎಂ) ಕ್ಲೋರಿನ್ ಅಂಶವಿರುವ ಬಗ್ಗೆ ಕ್ಲೋರೋಸ್ಕೋಪ್ ಬಳಸಿ ಪರೀಕ್ಷಿಸುವುದು.
8. ಕುಡಿವ ನೀರನ್ನು ಕಲುಷಿತಗೊಳಿಸುವ, ಕುಡಿಯುವ ನೀರಿನ ಪೂರೈಕೆಯಲ್ಲಿನ ದೋಷಗಳನ್ನು ಗುರುತಿಸಿ, ಸಂಬಂಧ ಪಟ್ಟವರಿಗೆ ಗ್ರಾಮ ಪಂಚಾಯತ್ ಸ್ಥಳೀಯ ಸಂಸ್ಥೆಗೆ ತಿಳಿಸಬೇಕು.
9. ವೈಯಕ್ತಿಗೆ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಹಾಗೂ ಆಹಾರದ ಸಂರಕ್ಷಣೆ, ಪರಿಸರ ನೈರ್ಮಲ್ಯದ ನಿರ್ವಹಣೆ ಬಗ್ಗೆ ತಿಳಿಸುವುದು.
10. ರಸ್ತೆ ಹಾಗೂ ಬೀದಿ ಬದಿಗಳಲ್ಲಿ ಮಾರುವ, ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದೆಂದು ಸಾರ್ವಜನಿಕರಿಗೆ ಸೂಚಿಸುವುದು.
11. ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕ ಮತ್ತು ಸೋಂಕಿತರು ಬಳಸಿದ ಯಾವುದೇ ವಸ್ತುಗಳನ್ನು ಸಂಸ್ಕರಿಸದೇ ಉಪಯೋಗಿಸದಂತೆ ತಿಳಿವಳಿಕೆ ನೀಡುವುದು.
12. ಸಂಶಯಾಸ್ಪದ ಪ್ರದೇಶಗಳ ಹೋಟೆಲ್ ಮತ್ತು ಕ್ಯಾಂಟೀನ್ಗಳಲ್ಲಿ ಬಿಸಿ ನೀರು ಸರಬರಾಜು ಮಾಡಲು ಹೋಟೆಲ್ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದು.
13, ತೆರೆದ ಬಾವಿ ಮತ್ತು ಕೆರೆ ಕುಂಟೆಗಳ ನೀರನ್ನು ಗೃಹೋಪಯೋಗಿ ಕಾರ್ಯಗಳಿಗೆ ಉಪಯೋಗಿಸುವಾಗ ಕಡ್ಡಾಯವಾಗಿ ಕ್ಲೋರಿನೇಷನ್ ಮಾಡಿಯೇ ಉಪಯೋಗಿಸಲು ತಿಳಿವಳಿಕೆ ನೀಡುವುದು.
14. ಜಿಲ್ಲೆಯಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಲ್ಲಿ ಸಹ ನಿರ್ದೇಶಕರು, ಸಾಂಕ್ರಾಮಿಕ ರೋಗಗಳ ವಿಭಾಗದ ಗಮನಕ್ಕೆ ತರುವುದು.