ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಆಡಳಿತ ವೆಚ್ಚ ಕಡಿತದ ಪ್ರಕ್ರಿಯೆಗೆ ಚಾಲನೆ ನೀಡುತ್ತಿದೆ. ಈಗಾಗಲೇ ವೆಚ್ಚ ಕಡಿತ ಅನಿವಾರ್ಯ ಎಂದಿರುವ ಸರ್ಕಾರ ಮುಂದಿನ ತಿಂಗಳಿಂದ ವೆಚ್ಚ ಕಡಿತದ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ.
ಲಾಕ್ಡೌನ್ನಿಂದ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ತೆರಿಗೆ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಕಾರಣ ಈ ಬಾರಿಯೂ ರಾಜ್ಯ ಸರ್ಕಾರ ಆದಾಯ ಕೊರತೆ ಎದುರಿಸಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸಾಲದ ಮೊರೆ ಹೋಗುತ್ತಿದೆ. ಬಹುತೇಕ ಆದಾಯ ನೌಕರರ ವೇತನ, ಪಿಂಚಣಿ, ಭತ್ಯೆಗಳು, ಆಡಳಿತ ವೆಚ್ಚಗಳಿಗೇ ವ್ಯಯ ಮಾಡುತ್ತಿದೆ. ಇದರಿಂದ ಸೊರಗಿದ ಸರ್ಕಾರದ ಬೊಕ್ಕಸದ ಮೇಲೆ ಭಾರೀ ಹೊರೆ ಬೀಳುತ್ತಿದೆ. ಹೀಗಾಗಿನೇ ಈ ಬಾರಿ ಆಡಳಿತ ವೆಚ್ಚ ಕಡಿತದ ಅನಿವಾರ್ಯತೆ ಎದುರಾಗಿದೆ. ಈ ಸಂಬಂಧ ಸಿಎಂ ಬೊಮ್ಮಾಯಿ ಸದನದಲ್ಲೇ ಅಪ್ರಿಯವಾದರೂ ಕೆಲ ಕಠಿಣ ವೆಚ್ಚ ಕಡಿತದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ನವೆಂಬರ್ನಿಂದ ವೆಚ್ಚ ಕಡಿತದ ಕೆಲ ಕ್ರಮಗಳು ಜಾರಿಗೆ ಬರಲಿದೆ. ಈ ಸಂಬಂಧ ಅಧಿಕಾರಿಗಳು ವೇದಿಕೆ ಸಜ್ಜುಗೊಳಿಸುತ್ತಿದ್ದು, ಕೆಲ ವೆಚ್ಚ ಕಡಿತದ ನಿರ್ಧಾರಗಳು ಜಾರಿಗೆ ಬರಲಿವೆ.
ನವೆಂಬರ್ನಿಂದ ವೆಚ್ಚ ಕಡಿತದ ಕ್ರಮ ಅನುಷ್ಠಾನ:
ನವೆಂಬರ್ ತಿಂಗಳಿಂದ ವೆಚ್ಚ ಕಡಿತದ ಕ್ರಮಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಈಗಾಗಲೇ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವ ಆಡಳಿತ ಸುಧಾರಣಾ ಆಯೋಗ ತನ್ನ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದೆ. ವರದಿಯಲ್ಲಿ ಕಂದಾಯ, ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರಿಗೆ ಇಲಾಖೆಯಲ್ಲಿ ಆಡಳಿತ ಸುಧಾರಣೆ ಹಾಗೂ ವೆಚ್ಚ ಕಡಿತದ ಶಿಫಾರಸುಗಳನ್ನು ಮಾಡಿದೆ. ಈ ವರದಿಯಲ್ಲಿನ ಬಹುತೇಕ ಶಿಫಾರಸುಗಳು ಅನುಷ್ಠಾನವಾಗಲಿದೆ ಎಂದು ಹೇಳಲಾಗುತ್ತಿದೆ.
ಆಯೋಗದ ಮಧ್ಯಂತರ ವರದಿ ಆಧಾರದಲ್ಲಿ ಈಗಾಗಲೇ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಕಂದಾಯ ಇಲಾಖೆ, ಸಾರಿಗೆ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಿ, ಯಾವ ಹಂತದಲ್ಲಿ ವೆಚ್ಚ ಕಡಿತ ಕೈಗೊಳ್ಳಬೇಕು, ಯಾವ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಎನ್ನುವುದರ ಬಗ್ಗೆ ಸಮಾಲೋಚನೆ ನಡೆದಿದೆ. ಮುಂದಿನ ತಿಂಗಳು ನವೆಂಬರ್ನಿಂದ ವೆಚ್ಚ ಕಡಿತದ ಕ್ರಮಗಳು ಅನುಷ್ಠಾನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ ಇದೇ ಡಿಸೆಂಬರ್ಗೆ ವಿಜಯ ಭಾಸ್ಕರ್ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ ಅಂತಿಮ ವರದಿಯನ್ನು ಸಲ್ಲಿಸಲು ಸಿದ್ಧತೆ ನಡೆಸಿದೆ. ಮಧ್ಯಂತರ ವರದಿ ಶಿಫಾರಸು ಅನುಷ್ಠಾನ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೂರು ಇಲಾಖೆಗಳಲ್ಲಿನ ವೆಚ್ಚ ಕಡಿತದ ಸಂಬಂಧ ಸಭೆ ನಡೆಸುತ್ತಿದ್ದಾರೆ. ಮಧ್ಯಂತರ ವರದಿಯಲ್ಲಿನ ಬಹುತೇಕ ವೆಚ್ಚ ಕಡಿತದ ಶಿಫಾರಸುಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ಪರಿಗಣಿಸಲಾಗುತ್ತಿರುವ ಪ್ರಮುಖ ವೆಚ್ಚ ಕಡಿತ ಏನು?:
- ಕಂದಾಯ ಇಲಾಖೆಯಲ್ಲಿ ಪ್ರಾದೇಶಿಕ ಆಯಕ್ತರ ಹುದ್ದೆ ರದ್ದತಿ
- ಪ್ರಾದೇಶಿಕ ಆಯುಕ್ತರ ಹುದ್ದೆ ಬದಲಿಗೆ ಕಂದಾಯ ಆಯುಕ್ತರ ಹುದ್ದೆ ಸೃಜನೆ
- ಪ್ರಾದೇಶಿಕ ಆಯುಕ್ತರ ಕಚೇರಿಗಳಲ್ಲಿನ 378 ಹುದ್ದೆಗಳ ರದ್ದು
- ಸೃಜಿಸುವ ಕಂದಾಯ ಆಯುಕ್ತಾಲಯಕ್ಕೆ ಕೇವಲ 186 ಹುದ್ದೆಗಳ ನೇಮಕ
- ಅಟಲ್ ಜನಸ್ನೇಹಿ ಕೇಂದ್ರ (ಎಜೆಎಸ್ ಕೆ) ಏಕಗವಾಕ್ಷಿ ಏಜೆನ್ಸಿಯಾಗಿಸಿ ಸುಮಾರು 800 ಸೇವೆಗಳನ್ನು ನಾಗರಿಕರಿಗೆ ಲಭ್ಯವಾಗುವಂತೆ ಮಾಡುವುದು
- ಎಲ್ಲಾ ಕಚೇರಿಗಳಿಗೆ ಇ-ಆಫೀಸ್ ಕಡ್ಡಾಯಗೊಳಿಸುವ ಶಿಫಾರಸು ಜಾರಿ
- ಸಾರಿಗೆ ಇಲಾಖೆಯಲ್ಲಿನ ಎರಡು ಐಟಿ ನಿರ್ದೇಶಕರ ಹುದ್ದೆ ಪೈಕಿ ಒಂದು ಹುದ್ದೆ ರದ್ದು
- ಎಲ್ಲಾ ಆರ್‌ಟಿಒ ಸೇವೆಗಳನ್ನು ಕಾಗದರಹಿತವಾಗಿ ಮಾಡುವ ಸಾಧ್ಯತೆ