ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿವೆ. ಜೊತೆಗೆ ಸಾವಿನ ಪ್ರಮಾಣ ಇಳಿಕೆ ಕಂಡಿದೆ.
ಕಳೆದ 7 ದಿನಗಳಿಂದ ರಾಜ್ಯದ 16 ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಜೊತೆಗೆ ಆ ಜಿಲ್ಲೆಗಳ ಸೋಂಕಿತರ ಪ್ರಮಾಣ ಕೂಡ ಕಡಿಮೆಯಾಗಿದ್ದು, ಕೊರೊನಾ ಮುಕ್ತ ಜಿಲ್ಲೆಯಾಗುವ ದಿನಗಳು ಸನಿಹದಲ್ಲಿವೆ.
ಕೋವಿಡ್ ಸೋಂಕಿಗೆ ರಾಮಬಾಣವಾಯ್ತು ಕೋವಿಡ್ ಲಸಿಕೆ?
ಕೊರೊನಾ ಮಟ್ಟಹಾಕಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ರಾಮಬಾಣವಾಗಿ ಕೋವಿಡ್ ಲಸಿಕೆ ಬಂದಿತ್ತು. ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆಯನ್ನ ಶೇ.60-70 ರಷ್ಟು ಮಂದಿ ತೆಗೆದುಕೊಂಡಿದ್ದಾರೆ. ಬೇರೆ ಭಾಗದಲ್ಲಿ ಕೊರೊನಾ ಆರ್ಭಟಿಸುತ್ತಿದ್ದರೂ ಇಲ್ಲಿ ನಿಯಂತ್ರಣ ಸಾಧ್ಯವಾಗಿರುವುದು ಲಸಿಕೆಯಿಂದಲೇ ಅಂತ ಹೇಳಲಾಗ್ತಿದೆ.
![ಲಸಿಕೆ ಪ್ರಮಾಣ](https://etvbharatimages.akamaized.net/etvbharat/prod-images/kn-bng-3-covid-death-free-16-story-7201801_08112021175323_0811f_1636374203_498.jpg)
ಯಾವೆಲ್ಲ ಜಿಲ್ಲೆಗಳು ಕೊರೊನಾ ಸಾವು ಮುಕ್ತ:
ಕಳೆದ 7 ದಿನಗಳಲ್ಲಿ ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಹಾಗೂ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೊಡಗು, ರಾಮನಗರ, ಶಿವಮೊಗ್ಗ, ಉಡುಪಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸಾವಿನ ವರದಿಯಾಗಿಲ್ಲ.
ಬೆಂಗಳೂರು - ಮೈಸೂರಿನಲ್ಲಿ ನಿಲ್ಲದ ಸಾವು- ಹೊಸ ಪ್ರಕರಣಗಳು:
ಕಳೆದ ಏಳು ದಿನಗಳಲ್ಲಿ ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೊಸ ಸೋಂಕಿನ ಪ್ರಕರಣಗಳು, ಸಾವಿನ ಪ್ರಕರಣಗಳು ವರದಿಯಾಗಿದೆ. ಕಳೆದ 7 ದಿನಗಳಲ್ಲಿ 31 ಮಂದಿ ಸೋಂಕಿತರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಮೈಸೂರು, ಉತ್ತರ ಕನ್ನಡ, ತುಮಕೂರು, ಬೆಂಗಳೂರು ನಗರ ,ಹಾಸನ, ದಕ್ಷಿಣಕನ್ನಡ, ಧಾರವಾಡ, ಕಲಬುರ್ಗಿ, ಮಂಡ್ಯ, ರಾಯಚೂರು, ಬೆಳಗಾವಿ, ಬೀದರ್, ಕೊಪ್ಪಳದಲ್ಲಿ ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕೋವಿಡ್ ಸಾವು ಮುಕ್ತ ಜಿಲ್ಲೆಯಲ್ಲಿ ಹೇಗಿದೆ ವ್ಯಾಕ್ಸಿನೇಷನ್?:
ಕೋವಿಡ್ ಸಾವು ಮುಕ್ತವಾಗಿರುವ ಎಲ್ಲ ಜಿಲ್ಲೆಗಳಲ್ಲೂ ವ್ಯಾಕ್ಸಿನೇಷನ್ ಕವರೇಜ್ ಶೇ.80 ರಷ್ಟು ಫಸ್ಟ್ ಡೋಸ್ ಮುಗಿದಿದೆ. ಎರಡನೇ ಡೋಸ್ ಶೇ.40ರಷ್ಟು ಗಡಿದಾಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?
ಜಿಲ್ಲೆ | 1st ಡೋಸ್ (%) | 2nd ಡೋಸ್ (%) |
ಬಾಗಲಕೋಟೆ | 88 | 46.1 |
ಬಳ್ಳಾರಿ | 85.9 | 43 |
ಬೆಂಗಳೂರು ಗ್ರಾಮಾಂತರ | 85.9 | 49.3 |
ಚಾಮರಾಜನಗರ | 83.4 | 53.7 |
ಚಿಕ್ಕಬಳ್ಳಾಪುರ | 89.8 | 53.7 |
ಚಿಕ್ಕಮಗಳೂರು | 89.9 | 43.1 |
ಚಿತ್ರದುರ್ಗ | 82.6 | 50.7 |
ದಾವಣಗೆರೆ | 83.3 | 41.3 |
ಗದಗ | 91.3 | 44.2 |
ಹಾವೇರಿ | 84.9 | 33.6 |
ಕೊಡಗು | 96.8 | 57 |
ರಾಮನಗರ | 92.2 | 59 |
ಶಿವಮೊಗ್ಗ | 89 | 41.9 |
ಉಡುಪಿ | 92.1 | 54.5 |
ವಿಜಯಪುರ | 94.9 | 41.1 |
ಯಾದಗಿರಿ | 85.4 | 42.4 |
ರಾಜ್ಯದಲ್ಲಿಂದು 283 ಮಂದಿಗೆ ಸೋಂಕು ದೃಢ: 6 ಸೋಂಕಿತರು ಬಲಿ..
ರಾಜ್ಯದಲ್ಲಿಂದು 1,05,278 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 283 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,90,235 ಕ್ಕೆ ಏರಿಕೆ ಆಗಿದೆ. 290 ಮಂದಿ ಡಿಸ್ಚಾರ್ಜ್ ಆಗಿದ್ದು, 29,44,099 ಜನ ಗುಣಮುಖರಾಗಿದ್ದಾರೆ. 6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,118 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 7,989 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.26 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.2.12 ರಷ್ಟಿದೆ. ವಿಮಾನ ನಿಲ್ದಾಣದಿಂದ 4,878 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 493 ಪ್ರಯಾಣಿಕರು ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಲ್ಲಿ 159 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,52,990 ಏರಿಕೆ ಆಗಿದೆ. 104 ಜನರು ಗುಣಮುಖರಾಗಿದ್ದು, 12,30,274 ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್ನಿಂದ ಒಬ್ಬರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,296ಕ್ಕೆ ಏರಿದೆ. ಸದ್ಯ 6419 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ಅಪ್‌ಡೇಟ್:
ಅಲ್ಫಾ - 155
ಬೆಟಾ - 08
ಡೆಲ್ಟಾ - 1698
ಡೆಲ್ಟಾ ಪ್ಲಸ್ - 04
ಡೆಲ್ಟಾ ಸಬ್ ಲೈನ್ಏಜ್ - 256
ಡೆಲ್ಟಾ ಸಬ್ ಲೈನ್ಏಜ್ AY.12H - 15
ಕಪ್ಪಾ - 160
ಈಟಾ - 01