ಬೆಂಗಳೂರು: ಮಹಾನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಸಂದರ್ಭ ಪ್ರತಿಭಟನೆ ನಡೆಸಿದ ಕಾರಣಕ್ಕೆ ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
'100 ನಾಟ್ಔಟ್' ಘೋಷಣೆ ಅಡಿ ರಾಜ್ಯಾದ್ಯಂತ ಇಂದಿನಿಂದ ಐದು ದಿನ ಇಂಧನ ಬೆಲೆ ಏರಿಕೆ ಖಂಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟಿರುವ ಕಾಂಗ್ರೆಸ್ ರಾಜ್ಯ ನಾಯಕರು ಇಂದು ಮೊದಲ ದಿನ ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಳಗ್ಗೆ 9ರಿಂದ 10 ಗಂಟೆಯವರೆಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿ ಹೋರಾಟ ನಡೆಸಿದ್ದಾರೆ. ಆದರೆ ಕೋವಿಡ್ 19 ಹಿನ್ನೆಲೆ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿದ್ದು, 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಯಲ್ಲಿದೆ. 10 ಗಂಟೆಯ ನಂತರ ಜಾರಿಯಲ್ಲಿರುವ ನಿಷೇಧಾಜ್ಞೆ ನಿಯಮವನ್ನು ಕಾಂಗ್ರೆಸ್ ನಾಯಕರು ಉಲ್ಲಂಘಿಸಿದ ಹಿನ್ನೆಲೆ ಬಂಧಿಸಲಾಯಿತು.
ಇದನ್ನೂ ಓದಿ: ಕಮ್ಯುನಿಸಂ, ಲೆನಿನಿಸಂ ಸಹೋದರರ ನೇತೃತ್ವದಲ್ಲಿ ಮಮತಾ ಬ್ಯಾನರ್ಜಿ ಕೈಹಿಡಿದ ಸೋಸಿಯಲಿಸಂ..
ರೆಡ್ಡಿ ಪೆಟ್ರೋಲ್ ಬಂಕ್ನಿಂದ ಹೈಗ್ರೌಂಡ್ಸ್ ಠಾಣೆಗೆ ಕೈ ನಾಯಕರನ್ನು ಕರೆದೊಯ್ಯಬೇಕಾಯಿತು. ಸೆಕ್ಷನ್ 144 ಜಾರಿ ಇದ್ದರೂ ಪ್ರತಿಭಟನೆ ಹಿನ್ನೆಲೆ ವಶಕ್ಕೆ ಪಡೆದಿದ್ದಾಗಿ ತಿಳಿಸಿದ ಪೊಲೀಸರು, ಪ್ರತಿಭಟನಾನಿರತರಿಂದ ಮುಚ್ಚಳಿಕೆ ಹಾಗೂ ವೈಯಕ್ತಿಕ ಮಾಹಿತಿ ಪಡೆದು ಬಿಟ್ಟು ಕಳುಹಿಸಿದ್ದಾರೆ.
ಇಂದು ಪ್ರತಿಭಟನೆ ನಡೆಸಿದ ಸಂದರ್ಭ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ, ಮಾಜಿ ಶಾಸಕ ಅಶೋಕ್ ಪಟ್ಟಣ್ ಸೇರಿದಂತೆ ಹಲವು ನಾಯಕರು ಬಂಧನಕ್ಕೆ ಒಳಗಾಗಿದ್ದರು.
'ನಾವು ಇದಕ್ಕೆಲ್ಲಾ ಹೆದರಬಾರದು'
ಪ್ರತಿಭಟನೆ ಸ್ಥಳದಲ್ಲೇ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾವು ನಿಯಮ ಮೀರಿದ್ದೇವೆ ಎಂದು ಪೊಲೀಸರು ಬಂಧಿಸಲು ಹೊರಟಿದ್ದಾರೆ. ನಾವು ಇದಕ್ಕೆಲ್ಲಾ ಹೆದರಬಾರದು. ಯಾವುದೇ ಕಾರಣಕ್ಕೂ ನಮ್ಮ ಪ್ರತಿಭಟನೆ ನಾಳೆಯಿಂದ ಸೂಚಿತ ಸ್ಥಳಗಳಲ್ಲಿ ಮುಂದುವರಿಯಬೇಕು ಎಂದರು.
ಇಡೀ ರಾಷ್ಟ್ರದ ಜನರ ಪಿಕ್ ಪಾಕೆಟ್ ಮಾಡಲಾಗಿದೆ. ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. 30 ಬಾರಿ ಬೆಲೆ ಏರಿಕೆ ಮಾಡಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕು. ನಾಳೆ, ನಾಡಿದ್ದು ಸೇರಿದಂತೆ 15ರವರೆಗೂ ವಿವಿಧ ಭಾಗಗಳಲ್ಲಿ ವಿವಿಧ ಹಂತದಲ್ಲಿ ಪ್ರತಿಭಟನೆಗೆ ಸೂಚಿಸಲಾಗಿದೆ. ಎಲ್ಲಿಯೂ ಬಂಧನಕ್ಕೆ ಹೆದರಬೇಡಿ. ಎಲ್ಲಕ್ಕೂ ಸಿದ್ಧರಾಗಿ. ನಾವು ಜನರನ್ನು ರಕ್ಷಿಸೋಣ ಎಂದು ಡಿಕೆಶಿ ಕರೆ ಕೊಟ್ಟರು.