ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾಗೋದು ಪಕ್ಕಾ ಆಗಿದೆ. ಆದ್ರೆ ಮುಂದಿನ ಮುಖ್ಯಮಂತ್ರಿ ಯಾರೆಂಬುದು ನಿಗೂಢವಾಗಿರುವ ವಿಷ್ಯ. ಬಿಎಸ್‌ವೈ ಬಳಿಕ ಯಾರು ಸಿಎಂ ಅನ್ನೋದು ಕೇಸರಿ ಕಲಿಗಳಿಗೇ ಗೊತ್ತಾಗ್ತಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಹೈಕಮಾಂಡ್ ಮುಂದಿನ ದಂಡನಾಯಕನ ಹೆಸರನ್ನು ರಹಸ್ಯವಾಗಿರಿಸಿದೆ. ಆದ್ರೆ ಸಿಎಂ ಇವರಾಗ್ತಾರಾ, ಅವರಾಗಬಹುದಾ ಎಂಬ ಚರ್ಚೆಗಳ ಮಾತ್ರ ನಡೆಯುತ್ತಲೇ ಇದ್ದು, ಬಿಜೆಪಿ ಹಾಗೂ ವಿಪಕ್ಷಗಳ ನಾಯಕರೂ ಒಂದಷ್ಟು ಹೇಳಿಕೆಗಳನ್ನು ನೀಡಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸಿಎಂ ಬದಲಾವಣೆ ಆಗ್ತಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಇತ್ತ ಮೈಸೂರಿನಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ. ನಾನಾಗಲಿ, ಮಠಾಧೀಶರಾಗಲಿ ಬೆಂಬಲ, ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜಕೀಯ ಜನ್ಮ ನೀಡಿದ ಜಿಲ್ಲೆಯ ಜನತೆ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ: ಸಿಎಂ ಬಿಎಸ್‌ವೈ
ಸಿಎಂ ಬದಲಾವಣೆ ವಿಚಾರದಲ್ಲಿ ಈಗಾಗಲೇ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಪಕ್ಷ ಹಾಗೂ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕಾದು ನೋಡಬೇಕಷ್ಟೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಮುರುಗೇಶ ನಿರಾಣಿ, ಸಿಟಿ ರವಿ ಸೇರಿದಂತೆ ಹಲವರ ಹೆಸರುಗಳು ರೇಸ್‌ನಲ್ಲಿ ಕೇಳಿ ಬರುತ್ತಿವೆ. ಆದ್ರೆ ಸಿಎಂ ಹುದ್ದೆಗೆ ನಾನು ಫ್ರಂಟ್ ರನ್ನರೂ ಅಲ್ಲ, ಬ್ಯಾಕ್ ರನ್ನರೂ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಲಾಬಿ ಮಾಡಿ ಮುಖ್ಯಮಂತ್ರಿ ಆದವರು ಅಂತ ಅನಿಸಿಕೊಳ್ಳೋದಿಲ್ಲ ಎಂದು ಸಚಿವ ಮುರುಗೇಶ ನಿರಾಣಿ ಹೇಳ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಯಾರಿಗೆ ಮಣೆ ಹಾಕ್ತಾರೆ ಎನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.