ಬೆಂಗಳೂರು: ಪ್ರತಿ ಬೂತ್ನಲ್ಲಿ ಶೇ.50ರಷ್ಟು ಮತಗಳನ್ನು ಸೆಳೆಯುವಂತೆ ಬೂತ್ಗಳ ಬಲವರ್ಧನೆ ಮಾಡಬೇಕು. ಅದಕ್ಕಾಗಿ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ತಿಂಗಳಿನಲ್ಲಿ 15 ದಿನ ಪ್ರವಾಸ ಮಾಡಬೇಕು ಎಂದು ಪದಾಧಿಕಾರಿಗಳಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ.
ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆಯಿತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಸಭೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬಿಜೆಪಿ ದುರ್ಬಲ ಇರುವ ವಿಧಾನಸಭೆ ಕ್ಷೇತ್ರಗಳಲ್ಲಿ ಸಿಎಂ ಪ್ರವಾಸ ಮಾಡಬೇಕು, ಸೆಪ್ಟೆಂಬರ್ ಮೊದಲ ವಾರದಿಂದ ಅಕ್ಟೋಬರ್ ಎರಡನೇ ವಾರದವರೆಗೆ ಜನೋತ್ಸವ ಸಮಾವೇಶಗಳನ್ನು ನಡೆಸಬೇಕು. ಒಟ್ಟು 7 ಬೃಹತ್ ಜಿಲ್ಲಾ ಸಮಾವೇಶಗಳನ್ನು ನಡೆಸಬೇಕು. ತಲಾ 50 ವಿಧಾನಸಭೆ ಕ್ಷೇತ್ರಗಳಲ್ಲಿ ಮೂರು ತಂಡಗಳಿಂದ ಪ್ರವಾಸ ಮಾಡಬೇಕು, ಸಿಎಂ ನೇತೃತ್ವದಲ್ಲಿ ಒಂದು ತಂಡ, ಕಟೀಲ್ ನೇತೃತ್ವದಲ್ಲಿ ಮತ್ತೊಂದು ತಂಡ, ಯಡಿಯೂರಪ್ಪ ನೇತೃತ್ವದಲ್ಲಿ ಇನ್ನೊಂದು ತಂಡ ಪ್ರವಾಸ ಮಾಡಬೇಕು ಎಂದು ತಿಳಿಸಿದರು.
(ಇದನ್ನೂ ಓದಿ: ಬಿಜೆಪಿಯಲ್ಲಿ ಯಡಿಯೂರಪ್ಪಗೆ ಉನ್ನತ ಸ್ಥಾನಮಾನ.. ಹೈಕಮಾಂಡ್ನಿಂದ ಡ್ಯಾಮೇಜ್ ಕಂಟ್ರೋಲ್ ಹೆಜ್ಜೆ)
ಈ ಕುರಿತು ರಾಜ್ಯ ವಕ್ತಾರ ಎಂ ಜಿ ಮಹೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಪ್ರತಿ ಬೂತ್ಗಳನ್ನು ಬಲಪಡಿಸಬೇಕು. ಶೇ.50 ರಷ್ಟು ಮತ ಪಕ್ಷಕ್ಕೆ ಬರುವಂತೆ ಬೂತ್ಗಳ ಸದೃಢಗೊಳಿಸಬೇಕು. ಇದಕ್ಕಾಗಿ ಪದಾಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕಿದೆ, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ತಿಂಗಳಿನಲ್ಲಿ 15 ದಿನ ಪ್ರವಾಸ ಮಾಡಿ ಬೂತ್ ಮಟ್ಟ ಬಲಪಡಿಸಬೇಕು ಎಂದು ಅರುಣ್ ಸಿಂಗ್ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಮುಂದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಇಂದಿನ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಸೆಪ್ಟೆಂಬರ್ 10, 11 ರಂದು ರಾಜ್ಯ ರಾಜಧಾನಿಯಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಯಿತು.
ಬಿಎಸ್ವೈಗೆ ಅವಕಾಶ ನೀಡಿದ್ದನ್ನು ಸ್ವಾಗತಿಸಿದ ಸಭೆ: ಬಿ ಎಸ್ ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ಸದಸ್ಯ ಸ್ಥಾನ ನೀಡಿದ ಹೈಕಮಾಂಡ್ ನಾಯಕರ ನಿರ್ಧಾರವನ್ನು ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಒಕ್ಕೊರಲಿನಿಂದ ಸ್ವಾಗತಿಸಲಾಯಿತು.
(ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಿಎಸ್ವೈ ಅವಶ್ಯಕತೆ ನಿರ್ವಿವಾದ: ಅರುಣ್ ಸಿಂಗ್)
ಪ್ರತಿಪಕ್ಷ ನಾಯಕರಾದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಸಿದ್ದರಾಮಯ್ಯನವರ ಹುಟ್ಟುಹಬ್ಬ "ಸಿದ್ದರಾಮೋತ್ಸವಕ್ಕೆ" ವ್ಯಕ್ತವಾಗಿದ್ದ ಜನ ಸ್ಪಂದನೆ ಗಮನಿಸಿದ ದೆಹಲಿ ಬಿಜೆಪಿ ವರಿಷ್ಠರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೆದುರು ಸೋಲುವ ಭೀತಿ ಉಂಟಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಾಚರಣೆಗೆ ಇಳಿದಿದೆ. ಅದರ ಪರಿಣಾಮವೇ ಯಡಿಯೂರಪ್ಪಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮತ್ತು ಕೇಂದ್ರ ಚುನಾವಣೆ ಸಮಿತಿಯಲ್ಲಿ ಸದಸ್ಯರಾಗಿ ನೇಮಕ ಮಾಡಿರುವುದು ಎಂಬ ಮಾತುಗಳು ಕೇಳಿಬರುತ್ತಿವೆ.