ಬೆಂಗಳೂರು: ಆನ್‍ಲೈನ್ ಜೂಜಿಗೆ ಕಡಿವಾಣ ಹಾಕುವ 2021ನೇ ಸಾಲಿನ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ, 2021 ಸಾಲಿನ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ ಹಾಗೂ 2021 ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ದೊರೆಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ಮಂಡನೆ ಮಾಡಿದ್ದ ಈ ವಿಧೇಯಕವನ್ನು ಪರ್ಯಾಲೋಚಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ವಿಧೇಯಕಕ್ಕೆ ಅನುಮೋದನೆ ದೊರೆಯಿತು.
ವಿಧೇಯಕ ಕುರಿತು ಕಾಂಗ್ರೆಸ್‍ನ ರಮೇಶ್ ಕುಮಾರ್ ಮಾತನಾಡಿ, ಆನ್‍ಲೈನ್ ದಂಧೆ ನಡೆಸುವುದು ಯಾರು, ಎಷ್ಟು ಪ್ರಮಾಣದಲ್ಲಿ ನಡೆಸುತ್ತಾರೆ ಎಂದೂ ಗೊತ್ತಿದೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನ ಶರತ್ ಬಚ್ಚೇಗೌಡ ಮಾತನಾಡಿ, ಐಪಿಎಲ್ ಶುರುವಾಯಿತು ಅಂದರೆ ಬುಕ್ಕಿಗಳು ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆನ್‍ಲೈನ್ ಬೆಟ್ಟಿಂಗ್ ವ್ಯವಸ್ಥಿತವಾಗಿ ನಡೆಯುತ್ತಿದೆ. ವಿದೇಶಗಳಲ್ಲಿ ಇದರ ನಿಯಂತ್ರಣವಿರುತ್ತದೆ. ಆದರೆ ಸ್ಥಳೀಯರ ಬೆಂಬಲವಿಲ್ಲದೇ ನಡೆಯುವುದಿಲ್ಲ. ಆದ್ದರಿಂದ ಈ ದಂಧೆ ನಿಯಂತ್ರಣಕ್ಕೆ, ಅದರಲ್ಲೂ ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಿಸಲು ವಿಧೇಯಕ ತರಲಾಗುತ್ತಿದೆ. ಜಾಮೀನಿರಹಿತ ಅಪರಾಧ ಎಂದು ಸದುದ್ದೇಶದಿಂದ ಮಾಡಿದ್ದೇವೆ. ಕಾನೂನು ಅಸ್ತ್ರ ಇದ್ದರೆ ನಿಯಂತ್ರಣ ತರಬಹುದು ಅದಕ್ಕಾಗಿ ವಿಧೇಯಕ ಎಂದು ಸಮರ್ಥಿಸಿಕೊಂಡರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ತಮಿಳುನಾಡಿನಲ್ಲಿ ಎಲ್ಲಾ ಗೇಮ್ ಬ್ಯಾನ್ ಮಾಡಿದ್ದಾರೆ. ಈ ರೀತಿ ಎಲ್ಲಾ ಆಟ ರದ್ದು ಮಾಡಿ ಎಂದು ನಾನು ಜೂನ್‍ನಲ್ಲಿ ಪತ್ರ ಬರೆದಿದ್ದೆ. ತಮಿಳುನಾಡು ಕಾನೂನು ನೋಡಿದ್ದೀರಾ? ಎಂದು ಪ್ರಶ್ನಿಸಿದಾಗ, ಪರಿಶೀಲಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಉತ್ತರಿಸಿದರು. ಚರ್ಚೆಯ ಬಳಿಕ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.
ಪೆಟ್ರೋಲ್, ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ..
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಆರ್.ವಿ. ದೇಶಪಾಂಡೆ, ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಚರ್ಚೆ ನಡೆಸಿದೆ. ಮೊನ್ನೆ ನಡೆದ ಜಿಎಸ್ಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕರ್ನಾಟಕ ರಾಜ್ಯ ತನ್ನ ನಿಲುವನ್ನ ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿಲ್ಲ. ರಾಜ್ಯ ಸರ್ಕಾರ ಪ್ರಬಲವಾಗಿ ಇದನ್ನು ವಿರೋಧಿಸಬೇಕು ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿ, ಪೆಟ್ರೋಲ್, ಡಿಸೇಲ್ ಜಿಎಸ್ಟಿ ವ್ಯಾಪ್ತಿಗೆ ಬಂದರೆ ರಾಜ್ಯಗಳಿಗೆ ನಷ್ಟವಾಗಲಿದೆ. ಪೆಟ್ರೋಲ್, ಡಿಸೇಲ್ ಮೇಲೆ ರಾಜ್ಯ ಸರ್ಕಾರಕ್ಕೆ ತೆರಿಗೆ ಹಾಕುವ ಅಧಿಕಾರ ಇರಲ್ಲ. ಈ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಸೆಲ್ಸ್ ಟ್ಯಾಕ್ಸ್ ಹಾಕುವ ಅಧಿಕಾರವನ್ನು ರಾಜ್ಯ ಸರ್ಕಾರ ತಮ್ಮ ಬಳಿಯೇ ಇಟ್ಟುಕೊಳ್ಳಬೇಕು. ಮತ್ತೊಮ್ಮೆ ಜಿಎಸ್ಟಿ ಸಭೆಯಲ್ಲಿ ಪೆಟ್ರೋಲ್, ಡಿಸೇಲ್ ಚರ್ಚೆ ಬಂದರೆ ಸರ್ಕಾರ ಪ್ರಬಲವಾಗಿ ವಿರೋಧಿಸಬೇಕು ಎಂದು ಹೇಳಿದರು. ಹಲವಾರು ಸದಸ್ಯರ ಚರ್ಚೆಯ ನಂತರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ದೊರೆಯಿತು.
ಇದನ್ನೂ ಓದಿ: ಪ್ರತಿಪಕ್ಷದ ಸದಸ್ಯರ ಸಭಾತ್ಯಾಗದ ನಡುವೆ ಚಾಣಕ್ಯ ವಿವಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ