ಬೆಳಗಾವಿ: ವಿಧಾನ ಸಭೆಯ ಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆದಿದ್ದ ಸಭೆಗೆ ಕಾಂಗ್ರೆಸ್ ಸದಸ್ಯರು ಹೋಗಬೇಡಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.
ವಿಧೇಯಕ ಮಂಡನೆಯಾದಾಗ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಂದಿದ್ದ ಕರಡನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಸ್ತಾಪಿಸಿದ್ದು, ಕಾವೇರಿದ ಚರ್ಚೆಗೆ ಕಾರಣವಾಯಿತು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ ಉಂಟಾಗಿ ಸದನದಲ್ಲಿ ಎರಡು ಕಡೆ ವಾಕ್ಸಮರ ನಡೆಯಿತು.
ಆಗ ಕಾಗೇರಿ ಅವರು ಕಡತಗಳ ಪರಿಶೀಲನೆಗಾಗಿ ಸಚಿವ ಮಾಧುಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನು ತಮ್ಮ ಕಚೇರಿಗೆ ಬರುವಂತೆ ಸೂಚನೆ ಕೊಟ್ಟರು. 10 ನಿಮಿಷ ಸದನವನ್ನು ಮುಂದೂಡುತ್ತೇನೆ. ಈ ಕಡತಗಳ ಪರಿಶೀಲನೆ ನಡೆಯಲಿ ನಂತರ ಸದನವನ್ನು ಮುಂದುವರೆಸೋಣ ಎಂದರು.
ಸದನವನ್ನು ಮುಂದೂಡಿ ಸಿದ್ದರಾಮಯ್ಯ ಸಭೆಗೆ ಹೋಗಲು ಮುಂದಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಅಂಜಲಿ ನಿಂಬಾಳ್ಕರ್ ಸೇರಿದಂತೆ ಮತ್ತಿತರ ಶಾಸಕರು ಸಭೆಗೆ ಹೋಗಬೇಡಿ, ಕಡತಗಳ ಪರಿಶೀಲನೆ ಮಾಡಬೇಡಿ ಎಂದು ಒತ್ತಾಯಿಸಿದರು.
ಗಲಾಟೆ ಮಾಡುವುದು ಬೇಡ:
ಇದಕ್ಕೂ ಮುನ್ನ ಸ್ಪೀಕರ್ ಕಾಗೇರಿ ಮಾತನಾಡಿ, ಧಾರ್ಮಿಕ ಸಂರಕ್ಷಣಾ ವಿಧೇಯಕ ಬಗ್ಗೆ ಜನರಿಗೆ ಬಹಳ ಕುತೂಹಲ ಇದೆ. ಜನರಿಗೂ ಈ ಬಗ್ಗೆ ಗೊತ್ತಾಗಲಿ. ಬಿಲ್ ಬಗ್ಗೆ ಸಂಪೂರ್ಣ ಚರ್ಚೆಗಳಾಗಲಿ. ಯಾರೂ ಗಲಾಟೆ ಮಾಡುವುದು ಬೇಡ ಎಂದು ಸೂಚನೆ ನೀಡಿದರು.
ಧಾರ್ಮಿಕ ಸ್ವಾತಂತ್ರ್ಯ ರೂಪಿಸಲು, ಶಿಫಾರಸು ಮಾಡಲು ಹಾಗೂ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ ಮಂಡಿಸಲು ಕರ್ನಾಟಕ ಕಾನೂನು ಆಯೋಗ ಶಿಫಾರಸು ಮಾಡಿದ್ದು, ಮಾನ್ಯ ಮುಖ್ಯಮಂತ್ರಿಯವರು ಸಚಿವ ಸಂಪುಟದಲ್ಲಿ ಮಂಡಿಸುವಂತೆ ಕಂಡಿಕೆ 10 ರಲ್ಲಿ ಸೂಚಿಸಿರುತ್ತಾರೆ ಎಂದು ಸ್ಪೀಕರ್ ಹೇಳಿದರು.
ಯಾವ ಬಿಲ್ ಅಂತಾ ಹೇಳಿ:
ಮತ್ತೆ ಮೇಜು ಕುಟ್ಟಿ ಸ್ವಾಗತ ಮಾಡಿದ ಬಿಜೆಪಿ ಶಾಸಕರು, ಶೇಮ್ ಶೇಮ್ ಎಂದು ಕೂಗಿದರು. ಸಿದ್ದರಾಮಯ್ಯ ಮಧ್ಯೆ ಪ್ರವೇಶ ಮಾಡಿ, ವಿಶ್ವ ಯುದ್ದ ಗೆದ್ದವರ ರೀತಿ, ಸ್ವಾತಂತ್ರ್ಯ ಹೋರಾಟ ಗೆದ್ದ ರೀತಿ ಟೇಬಲ್ ಕುಟ್ಟುವ ಅವಶ್ಯಕತೆ ಇಲ್ಲ ಎಂದರು. ನಾನು ನೋಡಿಲ್ಲ. ನಾನು ಆ ರೀತಿ ಹೇಳಿಲ್ಲ ಎಂದ ಸಿದ್ದರಾಮಯ್ಯ, ನಾನು ಸ್ಕ್ರೂಟಿನಿ ಕಮಿಟಿ ಮುಂದೆ ಬಂದಿಲ್ಲ. ಅದು ಯಾವ ಬಿಲ್ ಅಂತಾ ಹೇಳಿ, ನಾನು ಸಹಿ ಮಾಡಿದ್ದೀನಾ ಎಂದು ಪ್ರಶ್ನಿಸಿದರು.
ಸಂವಿಧಾನದ ಚೌಕಟ್ಟಿನಲ್ಲಿ ಬಿಲ್ ಜಾರಿ:
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ನಾವು ಸಂವಿಧಾನದ ಚೌಕಟ್ಟಿನಲ್ಲಿ ಬಿಲ್ ತಂದಿದ್ದೇವೆ. ಇದು ಸ್ವಾಗತಾರ್ಹ ಬಿಲ್. ಧರ್ಮ ಧರ್ಮಗಳ ನಡುವೆ ತರುವುದಕ್ಕೆ ಅವಕಾಶ ಇಲ್ಲ. ಗೃಹ ಸಚಿವರ ಜತೆ ಕುಳಿತು ಚರ್ಚೆ ಮಾಡಿ ತರಲಾಗಿದೆ. ಕಾಯ್ದೆ ಜಾರಿಗೆ ತರಲು ಅವಕಾಶ ಮಾಡಿಕೊಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು.
ಈ ರಾಜ್ಯವನ್ನು ದೇವರೇ ಕಾಪಾಡಬೇಕು: ಯಡಿಯೂರಪ್ಪ
ಯಡಿಯೂರಪ್ಪ ಮಧ್ಯಪ್ರವೇಶ ಮಾಡಿದಾಗ, ಸುಮ್ಮನೆ ಕುಳಿತುಕೊಳ್ಳಿ, ಆಮೇಲೆ ಮಾತನಾಡಿ ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಹೇಳಿದಾಗ, ಹಾಗೆಲ್ಲ ಹೇಳಬೇಡಿ ಅವರು ಹಿರಿಯರು ಎಂದು ಸ್ಪೀಕರ್ ಹೇಳಿದರು. ನಂತರ ಯಡಿಯೂರಪ್ಪ ಮಾತನಾಡಿ, ಕಾನೂನಿನ ಬಗ್ಗೆ ಸಾಕಷ್ಟು ತಜ್ಞರಿದ್ದು, ತಿಳಿದುಕೊಂಡಿದ್ದೀರಾ ನಿಮಗೆ ಅಭಿನಂದನೆ.
ಪ್ರಶ್ನೆ ಇರೋದು, ನಿಮ್ಮ ಕಾಲದಲ್ಲಿ ಏನಾಗಿದೆ ಎಂಬುದು. ನಿಮ್ಮ ಕಾಲದ ಕಾನೂನು ಸಚಿವರು ಮಾಡಿದ ಡ್ರಾಫ್ಟ್ ಓದಿದ್ದಾರೆ. ನೀವೇ ಮಾಡಿದ ದಾಖಲೆ ಒಪ್ಪಲ್ಲ, ನಂಬಲ್ಲ ಅಂದರೆ ದೇವರೇ ಕಾಪಾಡಬೇಕು ಈ ರಾಜ್ಯವನ್ನು. ಪ್ರಮಾಣಿಕವಾಗಿ ಆ ಕಾಲದಲ್ಲಿ ಪರಿಶೀಲಿಸಿದ್ದೇ ವಿರೋಧ ಮಾಡ್ತೀವಿ ಎನ್ನಿ ನಮ್ಮ ಅಭ್ಯಂತರ ಇಲ್ಲ. ಅದನ್ನೇ ನಮ್ಮ ಕಾನೂನಿನ ಸಚಿವರು ತಂದಿದ್ದಾರೆ. ಯಾವುದೇ ಸಮುದಾಯವನ್ನು ಬಲಾತ್ಕಾರ ಮಾಡಿ ಮತಾಂತರ ಮಾಡುವ ಉದ್ದೇಶ ಇದರಲ್ಲಿಲ್ಲ.
ಸ್ವ ಇಚ್ಛೆಯಿಂದ ಯಾರಾದರೂ ಯಾವ ಧರ್ಮಕ್ಕಾದರೂ ಹೋಗಬಹುದು. ಬಲವಂತ ಮಾಡೋದಕ್ಕೆ ಮಾತ್ರವೇ ನಮ್ಮ ವಿರೋಧ ಇದೆ. ತಾವು ದಾಖಲೆ ತರಿಸಿ ನೋಡಿ, ಇಲ್ಲದಿದ್ದರೆ ನೀವು ಅಪಹಾಸ್ಯಕ್ಕೆ ಈಡಾಗ್ತೀರಾ. ಆಗಿರುವುದನ್ನು ಒಪ್ಪಿಕೊಂಡು ಸರ್ವಾನುಮತದಿಂದ ಮಸೂದೆ ಪಾಸ್ ಮಾಡಲು ಅವಕಾಶ ಮಾಡಿಕೊಡುವಂತೆ ಬಿಎಸ್ ವೈ ಮನವಿ ಮಾಡಿದರು.
ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ: ಸಚಿವ ಮಾಧುಸ್ವಾಮಿ - ಸಿದ್ದರಾಮಯ್ಯ ಮಧ್ಯೆ ಸವಾಲು, ಪ್ರತಿ ಸವಾಲು