ಬೆಂಗಳೂರು: ಹಾಡಹಗಲೇ ದುಷ್ಕರ್ಮಿಗಳು ಬ್ಯಾಂಕ್ ಒಳಗಡೆ ನುಗ್ಗಿ ರೌಡಿಶೀಟರ್ ಬಬ್ಲಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೋರಮಂಗಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ಬ್ಯಾಂಕ್ನೊಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯನ್ನು ಮಾರಕಾಸ್ತ್ರಗಳಿಂದ ಹಂತಕರು ಕೊಚ್ಚಿ ಕೊಲೆ ಮಾಡಿದ್ದರು. ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಕೋರಮಂಗಲ ಠಾಣೆಗೆ ಕಮಲ್ ಪಂತ್ ಭೇಟಿ ನೀಡಿ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವಂತೆ ತಾಕೀತು ಮಾಡಿದ್ದಾರೆ.
ರೌಡಿಶೀಟರ್ ಬಬ್ಲಿ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಪತ್ನಿ ಜೊತೆ ಬ್ಯಾಂಕ್ಗೆ ಬಂದಿದ್ದ ಎನ್ನಲಾಗಿದೆ. ಬಬ್ಲಿ ಬ್ಯಾಂಕ್ ಒಳಗಡೆ ಹೋಗಿದ್ದೇ ತಡ ಆತನ ಹಿಂದೆ ಐದಾರು ಮಂದಿ ದುಷ್ಕರ್ಮಿಗಳು ಹೋಗಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಹತ್ಯೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಬರ್ಬರ ಕೊಲೆ!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವಿಶೇಷ ತಂಡ ರಚಿಸಿರುವ ಆಗ್ನೇಯ ವಿಭಾಗದ ಪೊಲೀಸರು, ತಾಂತ್ರಿಕ ಕಾರ್ಯಚರಣೆ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಜೊತೆಗೆ ಪೊಲೀಸರ 2 ತಂಡ ಹೊರ ರಾಜ್ಯಗಳಲ್ಲಿ ಸಹ ಹಂತಕರಿಗಾಗಿ ಹುಡುಕಾಟ ನಡೆಸುತ್ತಿದೆ. ಕೆಲವು ಶಂಕಿತ ವ್ಯಕ್ತಿಗಳನ್ನು ವಿಚಾರಣೆ ನಡೆಸಿ ಕೊಲೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಬ್ಲಿ ಕೊಲೆ ಹಿಂದೆ ವಿಲ್ಸನ್ ಗಾರ್ಡನ್ ರೌಡಿಯೊಬ್ಬನ ಹೆಸರು ತಳಕುಹಾಕಿಕೊಂಡಿದ್ದು, ಆತನ ಸಹಚರರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಆಡುಗೋಡಿಯ ಸುತ್ತ-ಮುತ್ತ ಬಬ್ಲಿ ತನ್ನದೇ ಪಟಾಲಂ ಕಟ್ಟಿಕೊಂಡಿದ್ದ ಎನ್ನಲಾಗಿದೆ.
ಇನ್ನು ಹತ್ಯೆ ವೇಳೆ ಆರೋಪಿಗಳು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಗುರುತು ಪೊಲೀಸರಿಗೆ ಸಿಗದಂತೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದಿದ್ದರು. ಹೀಗಾಗಿ ಕೃತ್ಯ ಬ್ಯಾಂಕ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾದರೂ ಕೂಡ ಖದೀಮರ ಮುಖ ಸ್ಪಷ್ಟವಾಗಿ ಕಂಡು ಬಂದಿಲ್ಲ. ಸ್ಥಳೀಯರೇ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.