ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಮ 69ರ ಅಡಿಯ ಚರ್ಚೆಯ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ, ಹೈದರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಆದಾಗ ಜನರು ಖುಷಿಪಟ್ಟಿದ್ದರು. ಆದರೆ ಯವುದೇ ರೀತಿಯ ಅಭಿವೃದ್ಧಿ ಆಗಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಈವರೆಗೆ ರಚನೆ ಆಗಿಲ್ಲ. ಯಾವುದೇ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ, ಒಂದೇ ಒಂದು ಸಭೆ ಕೂಡ ನಡೆದಿಲ್ಲ ಎಂದು ಹೇಳಿದರು.
ಮಂಜೂರಾತಿ ಆದ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ಸರ್ಕಾರ ಕೊಟ್ಟಿತ್ತು. ಆದ್ರೆ, ಕೋವಿಡ್ ನೆಪದಲ್ಲಿ ನೇರ ನೇಮಕಾತಿ ಹುದ್ದೆಗಳ ಭರ್ತಿ ತಡೆ ಹಿಡಿಯಲಾಗಿದೆ. 30 ರಿಂದ 40 ಸಾವಿರ ಹುದ್ದೆಗಳು ಖಾಲಿ ಇವೆ. ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಖಂಡ್ರೆ ಕಿಡಿ ಕಾರಿದರು.
ಇದೇ ವೇಳೆ ಶಾಸಕ ಅಜಯ್ ಸಿಂಗ್ ಮಾತನಾಡಿ, ಹೈದರಾಬಾದ್ ಕರ್ನಾಟಕದ ಹೆಸರು ಬದಲಾವಣೆ ಆದರೂ ಯಾವುದೇ ಅನುದಾನ ಸಿಕ್ಕಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಉದ್ಯೋಗ ನೇಮಕಾತಿ ಆಗುತ್ತಿಲ್ಲ. ಆರ್ಟಿಕಲ್ 371ಜೆ ತಿದ್ದುಪಡಿ ಮಾಡಿದ ಬಳಿಕ ಅನುದಾನ ಹೆಚ್ಚುವರಿ ಬರಬೇಕು. ಆದರೆ ಅದು ಸಿಗುತ್ತಿಲ್ಲ. 1,500 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ 370 ಕೋಟಿ ರೂ. ಏಳು ತಿಂಗಳಲ್ಲಿ ಬಿಡುಗಡೆ ಆಗಿದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಗೋವಿಂದ ಕಾರಜೋಳ, ಸ್ವಾತಂತ್ರ್ಯ ಬಂದು 70 ವರ್ಷದಲ್ಲಿ 60 ವರ್ಷ ಏನೇನು ಕಲ್ಯಾಣ ಮಾಡಿದ್ದೀರಿ ಎಂದು ಗೊತ್ತಿದೆ. 2013-14ರಲ್ಲಿ ಕಲ್ಯಾಣ ಕರ್ನಾಟಕಕ್ಕೆ 150 ಕೋಟಿ ಮಂಜೂರಾದರೆ 78 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
2014-15 ರಲ್ಲಿ 600 ಕೋಟಿ ರೂ. ಮಂಜೂರಾದರೆ 300 ಕೋಟಿ ರೂ. ಬಿಡುಗಡೆ ಆಗಿದೆ. 2017-18ರಲ್ಲಿ 1,000 ಕೋಟಿ ಮಂಜೂರಾದರೆ 800 ರೂ. ಬಿಡುಗಡೆ ಹಾಗೂ 2019-20ರಲ್ಲಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ 1,500 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.