ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಸಚಿವರ ಮೇಲೆ ಸಹ ಎಫ್ಐಆರ್ ದಾಖಲಿಸಬೇಕು ಎನ್ನುವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ.ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ.
ವೈದ್ಯರ ದಿನಾಚರಣೆ ಅಂಗವಾಗಿ ನಗರದ ಆರೋಗ್ಯ ಸೌಧ ಹಾಗೂ ಐಎಂಎ ನಲ್ಲಿ ವೈದ್ಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ ಮಾತನಾಡಿದ ಸಚಿವ ಸುಧಾಕರ್, ಎಫ್ಐಆರ್ ದಾಖಲಿಸಲಿ, ಯಾರು ಬೇಡ ಅಂದ್ರು. ಆಸ್ಪತ್ರೆ ಒಳಗೆ ವ್ಯತ್ಯಾಸ ಆಗಿದ್ದರೆ ಅದಕ್ಕೆ ಆರೋಗ್ಯ ಇಲಾಖೆ ಜವಾಬ್ದಾರಿ. ಸಂಬಂಧಪಟ್ಟವರ ಮೇಲೆ ಎಫ್‌ಐರ್ ದಾಖಲಿಸಲಿ ಎಂದರು.
ಸಚಿವರು ಲಸಿಕೆ ಇದೆ ಎಂದು ಸುಳ್ಳು ಹೇಳ್ತಿದ್ದಾರೆ ಅನ್ನೋ ಸಿದ್ದರಾಮಯ್ಯ ಆರೋಪದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಈವರಗೆ 2 ಕೋಟಿ 28 ಲಕ್ಷ ಲಸಿಕೆ ಕೊಟ್ಟಿದ್ದೇವೆ. ಲಸಿಕೆ ಕೊರತೆ ಇದ್ದರೆ ಇಷ್ಟು ಲಸಿಕೆ ಕೊಡಲು ಆಗುತ್ತಿತ್ತಾ?. ಇದರಲ್ಲಿ ನಾವು ಸುಳ್ಳು ಹೇಳುವುದಕ್ಕೆ ಆಗುತ್ತಾ?. ಕಾಂಗ್ರೆಸ್ನವರು ಮೊದಲಿನಿಂದಲೂ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡ್ತಿದ್ದಾರೆ ಎಂದರು.
ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಕೊಟ್ಟಿರುವುದು ಭಾರತದಲ್ಲಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾನು ಸೋಮವಾರ ದೆಹಲಿಗೆ ತೆರಳುತ್ತಿದ್ದೇನೆ. ಲಸಿಕೆ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇಂದು ರಾಜ್ಯಕ್ಕೆ 9 ಲಕ್ಷ ಕೋವಿಶೀಲ್ಡ್ ಬರುತ್ತಿದೆ. ಮಾಹಿತಿ ಇಲ್ಲದೆ ಕಾಂಗ್ರೆಸ್ನವರು ರಾಜಕೀಯ ಮಾಡೋದು ಬೇಡ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.