ಬೆಂಗಳೂರು : ರಾಜ್ಯಾದ್ಯಂತ ಜಲಮಿಷನ್ ಯೋಜನೆಯಡಿ 'ಮನೆ ಮನೆಗೆ ಗಂಗೆ 'ಎಂಬ ಕಾರ್ಯಕ್ರಮದಡಿ ಒಟ್ಟು 97.91 ಲಕ್ಷ ನಲ್ಲಿ ಸಂಪರ್ಕ ಕೊಟ್ಟಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ಇಂದು ತಿಳಿಸಿದರು. 2022-23ನೇ ಸಾಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ಇದರಲ್ಲಿ 45.4 ಲಕ್ಷ ನಲ್ಲಿಗೆ ನೀರು ಸಂಪರ್ಕ ಕಲ್ಪಿಸಿದ್ದೇವೆ. ರಸ್ತೆಗಳ ಅಭಿವೃದ್ಧಿ, ಗ್ರಾಮ ಪಂಚಾಯತ್ ಅಭಿವೃದ್ಧಿಗೂ ಒತ್ತು ನೀಡಿದ್ದೇವೆ ಎಂದರು.
ಜಲಜೀವನ ಮಿಷನ್ ಯೋಜನೆಯಡಿ 2,692 ಕೋಟಿ ರೂ. ಖರ್ಚಾಗಿದೆ. ಈ ಯೋಜನೆ ಆರಂಭದಲ್ಲಿ ವಿಳಂಬವಾಗಿದ್ದು ನಿಜ. ನೀರಿನ ಮೂಲಕ್ಕಾಗಿ ಕೆರೆ ಹಾಗೂ ನದಿ ನೀರು ಬಳಕೆ ಮಾಡುತ್ತೇವೆ. 48,890 ಕೆರೆಗಳನ್ನು ಅಭಿವೃದ್ದಿಪಡಿಸಲಾಗಿದೆ. ಹಾಗೆ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗುತ್ತಿಗೆದಾರರು ನಿರ್ವಹಿಸುವ ಕಾಮಗಾರಿಯ ಪರಿಶೀಲನೆಗೆ ಗ್ರಾಮೀಣಾಭಿವೃದ್ದಿ ಅಧಿಕಾರಿ ಹಾಗೂ ಕಾರ್ಯ ನಿರ್ವಹಣಾಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ದೇಶದಲ್ಲಿಯೇ ಜಲಜೀವನ ಮಿಷನ್ ಯೋಜನೆಯನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಜಲಜೀವನ ಮಿಷನ್ ಯೋಜನೆಗೆ ಹೆಚ್ಚು ಒತ್ತು ಕೊಟ್ಟು ಸುಸ್ಥಿರ ಮೂಲದಿಂದ ನೀರು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗುವುದು. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಕೋರಲಾಗುವುದು ಎಂದರು.
ಇದನ್ನೂ ಓದಿ: ನಿಯಮ ಉಲ್ಲಂಘನೆ ಮಾಡಿದ್ರೆ, ಟೋಲ್ ಗುತ್ತಿಗೆ ರದ್ದು: ಸಚಿವ ಸಿ.ಸಿ. ಪಾಟೀಲ್ ಎಚ್ಚರಿಕೆ