ಧಾರವಾಡ: ತಾಲೂಕಿನ ಬೋಗುರಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ 'ಹ್ಯಾಂಗ್ ಬಷೀರ್' ಎಂಬ ಅಭಿಯಾನ ಶುರುವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಧಾರವಾಡ ಜಿಲ್ಲೆಯ 14 ವರ್ಷದ ಬಾಲಕಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎನ್ನುವುದಾದರೆ, ಲೈಂಗಿಕ ದೌರ್ಜನ್ಯ ಎಸಗಿದ ಶಿಂಗನಹಳ್ಳಿ ಗ್ರಾಮದ ಆರೋಪಿ ಬಷೀರ್ ಗಡದಾರಗೆ ಮರಣ ದಂಡನೆ ವಿಧಿಸಬೇಕು ಎಂಬ ಉದ್ದೇಶದೊಂದಿಗೆ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ನಲ್ಲಿ ಬಷೀರ್ನನ್ನು ಗಲ್ಲಿಗೇರಿಸಲೇಬೇಕು ಎಂಬ ಅಭಿಯಾನ ಚುರುಕುಗೊಂಡಿದ್ದು, ಭಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ. ದೆಹಲಿ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ನೀಡಿದ ಶಿಕ್ಷೆಯನ್ನೇ ಆರೋಪಿ ಬಷೀರನಿಗೂ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಘಟನೆ ಸಂಬಂಧ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಅವರು ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದಿದ್ದಾರೆ.
ಆದರೆ, ಘಟನೆ ಗಂಭೀರತೆ ಪಡೆದುಕೊಳ್ಳುವ ಮುಂಚೆಯೇ ಅದು ತನ್ನ ಸ್ವರೂಪ ಕಳೆದುಕೊಳ್ಳುತ್ತದೆ. ಹೀಗಾಗಿ ಆತನಿಗೆ ಮರಣದಂಡನೆಯಾಗುವಂತೆಯೇ ಚಾರ್ಜಶೀಟ್ ಸಲ್ಲಿಕೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.