ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಸಮರಕ್ಕೆ ಸಿದ್ದವಾಗಿರುವ ಜೆಡಿಎಸ್, ಯಶವಂತಪುರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಫೈನಲ್ ಮಾಡಿದೆ.
ಯಶವಂತಪುರ ಕ್ಷೇತ್ರದಿಂದ ಜವರಾಯಿಗೌಡರ ಹೆಸರನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಗುರುವಾರ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ನಂತರ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಜೆಡಿಎಸ್ ವರಿಷ್ಠರು ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ನಾಳೆ ಮತ್ತೊಂದು ಸುತ್ತಿನ ಸಭೆ ನಡೆಸಲಿರುವ ವರಿಷ್ಠರು, ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ. ಮೂಲಗಳ ಪ್ರಕಾರ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಸ್ಪರ್ಧಿಸಲು ಉಪ ಮೇಯರ್ ಭದ್ರೇಗೌಡ, ಜೆಡಿಎಸ್ ಕಾರ್ಯಕರ್ತ ಆರ್.ವಿ. ಹರೀಶ್, ಬೆಂಗಳೂರು ಜೆಡಿಎಸ್ ಘಟಕದ ಅಧ್ಯಕ್ಷ ಪ್ರಕಾಶ್ ಆಕಾಂಕ್ಷಿಗಳಾಗಿದ್ದು, ಅಂತಿಮವಾಗಿ ಮಹಾಲಕ್ಷ್ಮಿ ಲೇಔಟ್ ನಿಂದ ಆರ್. ವಿ. ಹರೀಶ್ಗೆ ಬಹುತೇಕ ಟಿಕೇಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ತನ್ನ ಪಕ್ಷದ ಅನರ್ಹರ ಕ್ಷೇತ್ರಗಳ ಜೊತೆಗೆ ಬೇರೆ ಕ್ಷೇತ್ರಗಳ ಕಡೆಯೂ ಗಮನ ಕೊಟ್ಟಿರುವ ಜೆಡಿಎಸ್, ಕಾಂಗ್ರೆಸ್ ನ ಅನರ್ಹ ಶಾಸಕರ ಕ್ಚೇತ್ರಗಳಲ್ಲಿ ಗೆಲ್ಲಲು ಪಣತೊಟ್ಟಿದೆ ಎನ್ನಲಾಗುತ್ತಿದೆ. ಇಂದು ಶಿವಾಜಿನಗರ ಹಾಗೂ ಕೆ.ಆರ್ . ಪುರಂ ಕ್ಷೇತ್ರಗಳ ಮುಖಂಡರ ಜೊತೆ ಸಭೆ ನಡೆಯಲಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಉಪ ಚುನಾವಣೆ ಸಿದ್ಧತೆ, ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಈಗ ಜೆಡಿಎಸ್ ಕಾಂಗ್ರೆಸ್ ಮಣಿಸಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.