ಬೆಂಗಳೂರು: ಜೆಡಿಎಸ್ ಆಗಾಗ ನಮಗೆ ಹತ್ತಿರ ಬರುತ್ತದೆ, ಮತ್ತೆ ದೂರ ಹೋಗುತ್ತದೆ ಎಂದು ಬಿಜೆಪಿಗೆ ಜೆಡಿಎಸ್ ಬೆಂಬಲದ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸ್ಪಷ್ಟೀಕರಣ ನೀಡಿದರು.
ಬಿಜೆಪಿ ಪದಾಧಿಕಾರಿಗಳ ಸಭೆ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಯಾವತ್ತೂ ಕಾಂಗ್ರೆಸ್ ಹತ್ತಿರವಾಗಿಲ್ಲ. ಶತ್ರುವಿನ ಶತ್ರು ಮಿತ್ರ ಅನ್ನೋದು ರಾಜಕೀಯ ಪರಿಭಾಷೆ. ನಿದ್ದೆಗಣ್ಣಲ್ಲೂ ನಾವು ಕಾಂಗ್ರೆಸ್ ನಮ್ಮ ಶತ್ರು ಅಂತ ಹೇಳುತ್ತೇವೆ. ಅದಕ್ಕೆ ಬೇಕಾದ ತಂತ್ರಗಾರಿಕೆ ನಾವು ಆಗಾಗ ಮಾಡಿಯೇ ಮಾಡುತ್ತೇವೆ. ಮೊದಲು ಜೆಡಿಎಸ್ಅನ್ನು ಬಿಜೆಪಿ ಬೀ ಟೀಂ ಅಂತಿದ್ದ ಕಾಂಗ್ರೆಸ್ ಆಮೇಲೆ ಅವರ ಜೊತಗೆ ಸರ್ಕಾರ ಮಾಡಲಿಲ್ವಾ? ಅವರಿಗೆ ನಾಚಿಕೆ ಇದೆಯಾ? ಜೆಡಿಎಸ್ ಆಗಾಗ ನಮಗೆ ಹತ್ತಿರ ಬರುತ್ತದೆ, ದೂರ ಹೋಗುತ್ತದೆ ಎಂದು ಬಿಜೆಪಿಗೆ ಜೆಡಿಎಸ್ ಸಂಬಂಧದ ಕುರಿತು ಹೇಳಿದರು.
'ಸೋಲಿಸಿದವರ ಹೆಸರೇಳುವ ಧಮ್ಮು ಸಿದ್ದು ತೋರಬೇಕು'
ಕಾಂಗ್ರೆಸ್ ಪಕ್ಷದಲ್ಲೇ ಸದ್ದು ಮಾಡುತ್ತಿರುವ ಬೆನ್ನಿಗೆ ಚೂರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರವಿ, ಕಾಂಗ್ರೆಸ್ನ ಹಿರಿಯ ನಾಯಕರೆಲ್ಲ ತಮ್ಮ ತಮ್ಮ ಸೋಲಿಗೆ ಪಕ್ಷದ ಕಾರ್ಯಕರ್ತರು, ಮುಖಂಡರನ್ನೇ ಹೊಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಸೋಲಿಗೆ ಪಕ್ಷದ ಮುಖಂಡರೇ ಕಾರಣ ಅಂತಿದ್ದಾರೆ. ಹಿಂದೆಯೂ ಕೂಡ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಮುಖಂಡರೇ ತಮ್ಮ ಸೋಲಿಗೆ ಕಾರಣ ಅಂದಿದ್ದಾರೆ. ಸದ್ಯ ಆರೋಪ ಮಾಡುತ್ತಿರುವ ನಾಯಕರೆಲ್ಲರೂ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಯಕರಿಂದ ಇಂಥ ಮಾತುಗಳು ಬೇಕಿರಲಿಲ್ಲ. ತಮ್ಮ ಸೋಲಿಗೆ ಪಕ್ಷವೇ ಕಾರಣ ಎನ್ನುವುದರಿಂದ ಕಾರ್ಯಕರ್ತರ ಉತ್ಸಾಹ ಮತ್ತಷ್ಟು ಕುಗ್ಗುತ್ತಿದೆ. ಎಲ್ಲ ನಾಯಕರು ಒಬ್ಬರಿಗೊಬ್ಬರು ಅನುಮಾನದಿಂದ ನೋಡುವ ವಾತಾವರಣ ಸೃಷ್ಟಿಯಾಗುತ್ತಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಯಂತ್ರಣ ತರುವ ಸಂಬಂಧ ಗಮನಹರಿಸಿ. ಕಾಂಗ್ರೆಸ್ ಹಿರಿಯ ನಾಯಕರಿಂದಲೇ ಹೈಕಮಾಂಡ್ಗೆ ದೂರು ಸಲ್ಲಿಕೆಯಾಗಿದೆ ಇದು ಕಾಂಗ್ರೆಸ್ನ ಆಂತರಿಕ ಕಚ್ಚಾಟಕ್ಕೆ ನಿದರ್ಶನ ಎಂದರು.
ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರಲ್ಲ ಎನ್ನುವುದು ಈಗ ಸ್ಪಷ್ಟವಾಯಿತು. ಅವರ ಪಕ್ಷದೊಳಗೆ ಅವರ ವಿರೋಧಿಗಳಿದ್ದಾರೆ, ಎನ್ನೋದು ಗಂಭೀರವಾದ ವಿಚಾರ. ಯಾರು ತಮ್ಮ ವಿರೋಧಿ ಎನ್ನುವುದನ್ನು ಅವರೇ ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ಧಮ್ಮನ್ನು ತೋರಿಸಬೇಕು. ಕೆಲವೊಮ್ಮೆ ಸಿದ್ದರಾಮಯ್ಯ ಸತ್ಯ ಹೇಳುತ್ತಾರೆ, ಈಗಲೂ ಹೇಳಿದ್ದಾರೆ ಎಂದರು.
'ಐಫೋನ್ ಘಟಕದಲ್ಲಿ ಹಿಂಸಾಚಾರ ಘಟನೆ ಷಡ್ಯಂತ್ರ'
ಐಫೋನ್ ಘಟಕದಲ್ಲಿ ಹಿಂಸಚಾರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, 470 ಕೋಟಿ ರೂ. ಸಾಮಾಗ್ರಿಗಳ ಹಾನಿ ಆಗಿದೆ. ಇದು ಸಹಜವಾಗಿ ಆಗಿಲ್ಲ, ಉದ್ದೇಶಪೂರ್ವಕ ಇರಬಹುದು. ನೌಕರರು ದೂರು ಕೊಡದೇ, ಧರಣಿ ನಡೆಸದೇ ದಿಢೀರ್ ಹಾನಿ ಮಾಡುತ್ತಾರೆ ಅಂದರೆ ಇದು ಏನನ್ನು ಸೂಚಿಸುತ್ತದೆ. ನೌಕರರ ಹಿಂಸಾಚಾರ ಅರ್ಥ ಮಾಡಿಕೊಳ್ಳುವುದಕ್ಕೆ ಮಾನಸಿಕ ತಜ್ಞರ ಅಗತ್ಯ ಇಲ್ಲ. ಇದರ ಹಿಂದೆ ಷಡ್ಯಂತ್ರ ಇದೆ. ನೌಕರರರು ಸಂಬಳ ಕೇಳೋದಕ್ಕೆ ಬೇರೆ ದಾರಿ ಇದ್ದವು. ಆದರೆ ಹಿಂಸಾಚಾರ ನಡೆಸಿದ್ದು ಎಷ್ಟು ಸರಿ?. 470 ಕೋಟಿ ರೂ ನಷ್ಟಕ್ಕೆ ಯಾರು ಹೊಣೆ?. ಇದು ದುರುದ್ದೇಶದ ಹಿಂಸಾಚಾರ ಎಂದು ತಿಳಿಸಿದರು.
'ಸಂಕುಚಿತ ಭಾವದಿಂದ ಹೇಳಿದ್ದಲ್ಲ'
ತಮಿಳುನಾಡು ರಾಜ್ಯ ಒಬ್ಬ ಪ್ರಧಾನಿಯನ್ನು ಸೃಷ್ಟಿಸಲಿ ಎಂಬ ಹೇಳಿಕೆಯನ್ನು ನಾನು ಸಂಕುಚಿತ ಮನೋಭಾವದಿಂದ ಹೇಳಿದ್ದಲ್ಲ. ಆ ರಾಜ್ಯದಿಂದಲೂ ರಾಷ್ಟ್ರೀಯ ನಾಯಕತ್ವ ಬರಲೆಂಬ ದೃಷ್ಟಿಯಿಂದ ಆ ಹೇಳಿಕೆ ಕೊಟ್ಟಿದ್ದೆ ಎಂದು ತಮಿಳುನಾಡು ಉಸ್ತುವಾರಿಯೂ ಆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ರಾಜಾಜಿ, ಕಾಮರಾಜ್, ಸರ್ವಪಲ್ಲಿ ರಾಧಾಕೃಷ್ಣರಂತಹ ವ್ಯಕ್ತಿಗಳನ್ನ ತಮಿಳುನಾಡು ಕೊಟ್ಟಿತ್ತು. ಸ್ವಾತಂತ್ರ್ಯ ನಂತರ ತಮಿಳುನಾಡು ಮಂತ್ರಿಗಳನ್ನು ಕೊಟ್ಟಿದೆ ಆದರೆ ರಾಷ್ಟ್ರೀಯ ನಾಯಕರನ್ನು ಕೊಡಲಿಲ್ಲ ರಾಷ್ಟ್ರೀಯ ನಾಯಕತ್ವ ಬರಲೆಂಬ ದೃಷ್ಟಿಯಿಂದ ಹೇಳಿಕೆ ಕೊಟ್ಟಿದ್ದೆ ಎಂದು ಸಮಜಾಯಿಷಿ ನೀಡಿದರು.
'ರಾಷ್ಟ್ರೀಯ ನೇತೃತ್ವ ಸಂಕುಚಿತ ಮನೋಭಾವದಿಂದ ಬರಲ್ಲ'
ಭಾರತದ ಜೊತೆಗೆ ಕರ್ನಾಟಕದ ಅಭಿಮಾನ ಇದ್ದರೆ ನಾನು ಕೂಡ ರಾಷ್ಟ್ರೀಯ ನೇತಾರ ಆಗಬಹುದು. ಆದರೆ ನಾನು ಬರೀ ಕರ್ನಾಟಕದ ಮೇಲೆ ಅಭಿಮಾನ ಇಟ್ಟುಕೊಂಡರೆ ಇದು ಆಗಲ್ಲ. ಕರ್ನಾಟಕದಲ್ಲಿ ರಾಷ್ಟ್ರೀಯ ನೇತೃತ್ವ ವಿಚಾರದಲ್ಲಿ ಕಾಲ ನಿರ್ಣಯ ಮಾಡುತ್ತದೆ. ಮೋದಿಯವರು ಪ್ರಧಾನಿ ಆಗುತ್ತಾರೆ ಎಂದು ಯಾರೂ ಹೇಳಿರಲಿಲ್ಲ, ಆದರೆ ಸನ್ನಿವೇಶ ಅವರನ್ನ ಯಶಸ್ವಿ ಪ್ರಧಾನಿಯಾಗಿ ಮಾಡಿತು ಎಂದು ರಾಷ್ಟ್ರ ಮಟ್ಟದ ನಾಯಕನಾಗಿ ತಾವು ಕೂಡ ಬೆಳೆಯಲಿದ್ದೇನೆ ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದರು.
ರಾಜಕೀಯ ಧ್ರುವೀಕರಣ ಕುರಿತು ಅರವಿಂದ ಲಿಂಬಾವಳಿ ಮಾತು
ಸಿದ್ದರಾಮಯ್ಯ ಬಹಳ ನಿರಾಸೆಯಿಂದ ಮಾತಾಡಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಯಾರು ಮುಂದಾಗಿದ್ದರೋ ಅವರೇ ಈಗ ಪರಸ್ಪರ ಕಿತ್ತಾಡುವ ಸಂದರ್ಭ ಬಂದಿದೆ. ಹೀಗಾಗಿ ಬರುವಂತ ದಿನಗಳಲ್ಲಿ ರಾಜಕೀಯ ಧ್ರುವೀಕರಣ ಮತ್ತಷ್ಟು ಆಗಲಿದೆ. ಯಾವ ರೀತಿ ಆಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿಯಂತೂ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಒಂದು ಪಕ್ಷ ಮತ್ತೊಂದು ಪಕ್ಷದ ಜೊತೆ ಮರ್ಜ್ ಆಗುತ್ತದೆ ಎಂಬ ಸುದ್ದಿ ಬಗ್ಗೆ ನಾನು ಕೇಳಿದ್ದೇನೆ ಅಷ್ಟೇ, ನಾನು ಈ ಬಗ್ಗೆ ಹೆಚ್ಚು ಏನೂ ಹೇಳಲು ಸಾಧ್ಯವಿಲ್ಲ ಎಂದು ಜೆಡಿಎಸ್ ವಿಲೀನವಾಗುವ ಕುರಿತು ಹೆಚ್ಚಿನ ಮಾಹಿತಿ ನೀಡಲು ಅರವಿಂದ ಲಿಂಬಾವಳಿಯವರು ನಿರಾಕರಿಸಿದರು.