ಬೆಂಗಳೂರು : ವಿಧಾನಸಭೆಯಲ್ಲಿ ಅನುದಾನ ತಾರತಮ್ಯ ಕುರಿತು ನಡೆದ ಚರ್ಚೆಯಲ್ಲಿ ರೇವಣ್ಣ, ಆಡಳಿತ ಪಕ್ಷದ ಸದಸ್ಯರಿಗೆ 20 ಕೋಟಿ ರೂ. ನೀಡಿದರೆ ನಮಗೆ ಐದಾರು ಕೋಟಿ ರೂ. ಆದರೂ ಕೊಡಿ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಶಿವಲಿಂಗೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಕೊಟ್ಟಿದ್ದಾರೆ. ಪದೇ ಪದೇ ಕೊಟ್ಟಿಲ್ಲ ಎಂದು ಹೇಳಿ ಅವರ ಮನಸ್ಸು ನೋವಿಸಬೇಡಿ. ದಯವಿಟ್ಟು ರೇವಣ್ಣ ಅವರಿಗೆ 10 ಕೋಟಿಯಾದರೂ ಕೊಟ್ಟುಬಿಡಿ. ಇಲ್ಲದಿದ್ದರೆ ಅವರು ನಮ್ಮನ್ನು ಸುಮ್ಮನೆ ಬಿಡಲ್ಲ ಎಂದು ರೇಗಿಸಿದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಮಗೆ ಅನುದಾನ ನೀಡಿದ್ದಾರೆ, ಬಿಜೆಪಿಗೆ ಕೊಟ್ಟಿರಲಿಲ್ಲ ಎಂದು ಚರ್ಚೆ ಮಾಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು. ಇದರಿಂದ ಸ್ಪಲ್ಪ ಕೋಪಗೊಂಡ ರೇವಣ್ಣ ವ್ಯಂಗ್ಯವಾಗಿ, ಶಿವಲಿಂಗೇಗೌಡರಿಗೆ ಚಾಣಾಕ್ಷತನ ಇದೆ. ಶಿವಮೊಗ್ಗ ರಸ್ತೆಯಲ್ಲಿ ಓಡಾಡುತ್ತಾರೆ. ಸಿದ್ದರಾಮಯ್ಯ, ಯಡಿಯೂರಪ್ಪ ಹತ್ತಿರ ಹೇಗೆ ಕೆಲಸ ಮಾಡಿಸಿಕೊಳ್ಳಬೇಕು ಎಂದು ಗೊತ್ತಿದೆ ಕಾಲೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ನಾವು ವಿರೋಧ ಪಕ್ಷದಲ್ಲಿದ್ದೇವೆ. ಆಡಳಿತ ಪಕ್ಷದವರ ಕೈ ಮುಗಿಯಲೇಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದರಿಂದಲೇ ನಾನು ಎರಡು ಬಾರಿ ವಿಧಾನಸಭೆಗೆ ಬಂದಿದ್ದೇನೆ. 300 ಕೋಟಿ ರೂ. ಅನ್ನು 530 ಹಳ್ಳಿಗಳಿಗೆ ನೀಡಿದ್ದಾರೆ. ಎತ್ತಿನ ಹೊಳೆ ಯೋಜನೆಯನ್ನು ಮಂಜೂರು ಮಾಡಿದ್ದಾರೆ. ಇದನ್ನು ಬಹಿರಂಗವಾಗಿ ಈ ಹಿಂದೆಯೂ ಹೇಳಿದ್ದೇನೆ ಎಂದು ರೇವಣ್ಣ ಮಾತಿಗೆ ತಿರುಗೇಟು ನೀಡಿದರು.
ಇದರ ಮಧ್ಯೆ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ , ಶಿವಲಿಂಗಣ್ಣ ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ಹೇಳಿದರು. ರೇವಣ್ಣ ಮಾತು ಮುಂದುವರಿಸಿ, ಕ್ಷೇತ್ರಕ್ಕೆ ಹಣ ತಂದರೆ ಸಮಸ್ಯೆ ಇಲ್ಲ. ಜನ ಸೇವೆ ಮಾಡುವಾಗ ಕ್ಷೇತ್ರಕ್ಕೆ ಅನುದಾನ ತರಬೇಕು. ಇದಕ್ಕೆ ನನ್ನ ಯಾವುದೇ ಆಕ್ಷೇಪ ಇಲ್ಲ ಎಂದು ಚರ್ಚೆ ಮುಕ್ತಾಯಗೊಳಿಸಿ, ಅನುದಾನ ತಾರತಮ್ಯದ ಕುರಿತು ಮಾತು ಮುಂದುವರಿಸಿದರು.
ಇದನ್ನೂ ಓದಿ: ಆನ್ಲೈನ್ ಜೂಜಿಗೆ ಕಡಿವಾಣ ಹಾಕುವ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ