ಬೆಂಗಳೂರು : ಸಿಆರ್‌ಎಫ್ ಅನುದಾನದ ವಿಚಾರದಲ್ಲಿ ಸಚಿವ ಮಾಧುಸ್ವಾಮಿ ಹಾಗೂ ಜೆಡಿಎಸ್ ಸದಸ್ಯ ಹೆಚ್ ಡಿ ರೇವಣ್ಣ ನಡುವೆ ವಾಗ್ವಾದಕ್ಕೆ ವಿಧಾನಸಭೆ ಕಲಾಪ ಇಂದು ಸಾಕ್ಷಿಯಾಯಿತು. ಸಿಆರ್‌ಎಫ್‌ಗೆ ನೀವು ಎಷ್ಟು ದುಡ್ಡು ಕೊಟ್ಟಿದ್ರಿ. ಅವತ್ತಿನ ನಿಮ್ಮ ಬಜೆಟ್ ಪ್ರಾವಿಜನ್ ಎಷ್ಟಿತ್ತು.
ಮೂರು ಸಾವಿರ ಕೋಟಿ ದುಡ್ಡು ಇಟ್ಟುಕೊಂಡು, ಎಷ್ಟು ಕೊಟ್ಟಿದ್ರು ಎಂದು ಅವರು ಕೇಳಬೇಕು. ಇವರು ಮಾಡಿದ್ದೆಲ್ಲಾ ನಾವು ಬಾಚಾಕೋಕೆ ಇದ್ದೀವಾ? ಏನ್ ಮಾಡಬೇಕು ಪಿಡಬ್ಲ್ಯೂಡಿ ಇಲಾಖೆ? ಎಂದು ಸಚಿವ ಮಾಧುಸ್ವಾಮಿ ಏರು ಧ್ವನಿಯಲ್ಲಿ ಮಾತನಾಡಿದರು.
ಕಾನೂನು ಸಚಿವರು ಸ್ವಲ್ಪ ಈಲ್ಡ್ ಆಗಬೇಕು ಎಂದು ರೇವಣ್ಣ ಹೇಳಿದಾಗ, ಅವರ ಮಾತಿನಿಂದ ಮತ್ತೆ ಸಿಟ್ಟಾದ ಸಚಿವ ಮಾಧುಸ್ವಾಮಿ, ಸರ್ಕಾರಕ್ಕೆ ಏನು ದುಡ್ಡು ಸುರಿಯುತ್ತಾ? ರೇವಣ್ಣ ಏನು ಬೇಕಾದರೂ ಮಾಡಿದ್ರೆ ಆಗುತ್ತೆ ಅಂತಾ ಎಲ್ಲೆಲ್ಲಿ ಬೇಕೋ ಅಲ್ಲಿ ಮಕ್ಕಳು ಹುಟ್ಟಿಸಿ ಹೋಗ್ಬಿಟ್ರೆ ಅವರಿಗೆಲ್ಲ ಹೆಸರು ಕಟ್ಟೋರು ಯಾರಾಪ್ಪ..
ಅವರಿಗೆ ಆಮೇಲೆ ಆಸ್ತಿ ಹಂಚಿ ಕೊಡೋದು ಯಾರು? ಎಂದು ಪ್ರಶ್ನಿಸಿದರು. ಈ ವೇಳೆ ಸಿಆರ್‌ಎಫ್ ಫಂಡ್ ಬಗ್ಗೆ ದಾಖಲೆ ಇಡೀ ಎಂದ ರೇವಣ್ಣ, ನನ್ನಿಂದ ತಪ್ಪಾಗಿದ್ದರೆ ಈ ಸದನದಲ್ಲಿ 5 ನಿಮಿಷನೂ ನಾನು ಇರಲ್ಲ ಎಂದು ಮಾಧುಸ್ವಾಮಿಗೆ ತಿರುಗೇಟು ನೀಡಿದರು.
ಸದನದ ಬಾವಿಗಿಳಿದು ಜೆಡಿಎಸ್ ಸದಸ್ಯರ ಧರಣಿ
ಅನುದಾನ ಬಂದಿಲ್ಲವೆಂದು ಸದನದ ಬಾವಿಗಿಳಿದು ಧರಣಿ ನಡೆಸಿದ ಜೆಡಿಎಸ್ ಸದಸ್ಯರು, ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ ಡಿ ಕುಮಾರಸ್ವಾಮಿ ಬೇಕಾಬಿಟ್ಟಿ ಅನುದಾನ ಕೊಟ್ಟಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಇದಕ್ಕೆ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಸದಸ್ಯರ ವರ್ತನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಕೆ ನೀಡಿ, ಬರೀ ನೀವೇ ಮಾತನಾಡಬೇಕು ಅಂದ್ರೆ ಹೇಗೆ? ಸರ್ಕಾರ ಉತ್ತರ ಕೊಡೋಕೆ ಬಿಡಿ ಎಂದರು. ಇದಕ್ಕೆ ರೇವಣ್ಣ ಆಕ್ಷೇಪಿಸಿ ಸ್ಪೀಕರ್ ವಿರುದ್ಧವೇ ಮಾತನಾಡಿದರು.
ಇದರಿಂದ ಕೆಂಡಾಮಂಡಲರಾದ ಸ್ಪೀಕರ್, ರೇವಣ್ಣ ಅವರಿಗೆ ವಾರ್ನಿಂಗ್ ಕೊಟ್ಟರು. ಇಂತಹ ಹೇಳಿಕೆಗಳನ್ನು ನಾನು ಸಹಿಸುವುದಿಲ್ಲ ರೇವಣ್ಣ ಅವರೇ ಎಂದು ಗರಂ ಆದರು. ಈ ವೇಳೆ ರೇವಣ್ಣ ಅವರು ಕ್ಷಮಾಪಣೆ ಕೇಳುವಂತೆ ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು.