ಬೆಂಗಳೂರು: ಮುಂಬರುವ 2023ರ ವಿಧಾನಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ಸಂಜೆ ಜಾತ್ಯಾತೀತ ಜನತಾದಳ ಕಚೇರಿ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಹೆಚ್ಡಿಕೆ, ಮುಂದಿನ ಈ ಎರಡೂ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಹೆಬ್ಬಾಳದಲ್ಲಿ ಕಚೇರಿ ಪ್ರಾರಂಭ ಮಾಡಲಾಗಿದೆ. ಈ ಭಾಗದಲ್ಲಿ ಪಕ್ಷ ಸಂಘಟನೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕ್ಷೇತ್ರದಲ್ಲಿ ಪಕ್ಷವು ಪ್ರಬಲವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಹೇಗಿದೆ? ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆ ಒಂದು ಕಡೆ ಇರಲಿ. ನಾವು-ನೀವು ಯೋಚನೆ ಮಾಡುವುದು ಯಾವ ವಿಚಾರ ಎನ್ನುವುದು ಮುಖ್ಯವಾಗುತ್ತದೆ. ನಿತ್ಯದ ಜೀವನದಲ್ಲಿ ಯಾವ ರೀತಿ ನೋವು ಅನುಭವಿಸುತ್ತಿದ್ದೀರಾ? ನಿತ್ಯದ ನಿಮ್ಮ ಶ್ರಮಕ್ಕೆ ಯಾವ ಶಕ್ತಿಯನ್ನು ಸರ್ಕಾರ ತುಂಬುತ್ತಿದೆ? ನೀವು ಕಟ್ಟುವ ತೆರಿಗೆಗೆ ಸರ್ಕಾರ ನಡೆಸುವವರು ಶಕ್ತಿ ತುಂಬುತ್ತಿದ್ದಾರಾ ಎನ್ನುವುದು ಮುಖ್ಯ ಎಂದರು.
ಶಿಕ್ಷಣ ವ್ಯವಸ್ಥೆ ಹಾಳಾಗಿದೆ: ಕಳೆದ ಎರಡು ವರ್ಷದಿಂದ ಶಿಕ್ಷಣದಲ್ಲಿ ಏನಾಗಿದೆ? ಆನ್ಲೈನ್ ಶಿಕ್ಷಣ ಕೊಟ್ಟಿದ್ದೇವೆ ಅಂತಾರೆ. ಆದರೆ ಬಡವರಿಗೆ ಇದು ತಲುಪಿದೆಯಾ? ಕೋವಿಡ್, ಹಿಜಾಬ್ ಮತ್ತು ಕೇಸರಿ ಶಾಲು ಎಂದೆಲ್ಲ ಹೇಳಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದರೆಂದು ಕಿಡಿಕಾರಿದರು.
ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ: ಶಾಲಾ ಕಾಲೇಜು ಪರಿಸ್ಥಿತಿ ಏನಾಗಿದೆ. ಸರ್ಕಾರಿ ಶಾಲೆಗೆ ರಾಜಕಾರಿಗಳ ಮಕ್ಕಳನ್ನು ಕಳಿಸುತ್ತಾರ? ಮುಸ್ಲಿಮರ ಸಂಪ್ರದಾಯವಾಗಿ ಡ್ರೆಸ್ ಕೋಡ್ ಇದೆ. ಇದು ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಶಾಲೆಗಳಿಗೆ ಮಕ್ಕಳು ಹೋಗಬೇಕಾದರೆ ಹಿಜಾಬ್ ಧರಿಸಿಕೊಂಡು ಹೋಗುತ್ತಾರೆ. ಇದನ್ನೇ ಪ್ರಮುಖವಾಗಿ ಇಟ್ಟುಕೊಂಡು ಉಡುಪಿಯಲ್ಲಿ ಒಂದು ಘಟನೆ ನಡೆಯಿತು. ಅಲ್ಲಿಂದ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿತು. ಎರಡು ಸಮಾಜದ ತಾಯಂದಿರು ಈ ಸಭೆಯಲ್ಲಿ ಇದ್ದೀರಿ. ಎರಡು ರಾಷ್ಟ್ರೀಯ ಪಕ್ಷಗಳು ನಿಮ್ಮ ಮುಗ್ಧ ಮನಸ್ಸುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ವಶೀಕರಣ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ವೋಟ್ ಬ್ಯಾಂಕ್ ರಾಜಕಾರಣ: ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಖಾಸಗಿ ಶಾಲೆಗಳಲ್ಲಿ ಇಂಥಹ ಗಲಾಟೆಗಳು ನಡೆದಿಲ್ಲ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿವೆ. ಸರ್ಕಾರಿ ಶಾಲೆಗೆ ಹೋಗುವುದು ಬಡವರ ಮಕ್ಕಳು. ಇಲ್ಲಿ ಈ ರೀತಿ ವಾತಾವರಣ ಸೃಷ್ಟಿ ಮಾಡಿ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಶಿವಮೊಗ್ಗ ಘಟನೆ: ಮುಸ್ಲಿಂ ಸಮುದಾಯಕ್ಕೆ ನಾವೇ ರಕ್ಷಣೆ ನೀಡುವುದು ಅಂತ ಹೇಳಿ ಆ ಸಮುದಾಯವನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ? ಎನ್ನುವುದನ್ನು ನಾನು ಬಲ್ಲೆ. ಶಿವಮೊಗ್ಗದಲ್ಲಿ ನಡೆದ ಘಟನೆ ಏನಾಗಿದೆ ಈಗ? ಅದು ಹಿಜಾಬ್-ಕೇಸರಿ ಶಾಲು ಗಲಾಟೆಯಿಂದ ಆಗಿದ್ದಲ್ಲ. ಐದು ವರ್ಷದ ಹಿಂದೆ ಯುವಕನ ತಾಯಿ ನನ್ನ ಮಗನಿಗೆ ಜೀವ ಬೆದರಿಕೆ ಇದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದು ಅಲ್ಲಿಯ ರಾಜಕಾರಣಿಗಳಿಗೆ ಗೊತ್ತಿರಲಿಲ್ವಾ? ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ದೇಶ ಮುಗಿಸಲು ಹೊರಟಿದೆ: ಸಿಎಎ, ಎನ್ಆರ್ಸಿಎ ಜಾರಿಗೆ ಹೊರಟವರು ಏನೆಲ್ಲಾ ಮಾಡಿದರು ಎನ್ನುವುದು ದೇಶಕ್ಕೆ ಗೊತ್ತಿದೆ. ಆಗ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಯಿತು. ಮತಾಂತರ ನಿಷೇಧ ಮಸೂದೆ ತರುವುದಕ್ಕೆ ಮುಂದಾದರು. ಉತ್ತರ ಪ್ರದೇಶದ ಚುನಾವಣೆ ನಡೆಯುತ್ತಿದೆ. ಆ ದೃಷ್ಟಿಯಲ್ಲೇ ಇದೆಲ್ಲ ನಡೆಯುತ್ತಿದೆ. ಬಿಜೆಪಿಯನ್ನು ನಂಬಬೇಡಿ. ದೇಶ ಮುಗಿಸಲು ಹೊರಟಿದ್ದಾರೆ ಅವರು. ಆದರೆ ಕಾಂಗ್ರೆಸ್ ನಾಯಕರು ನಮ್ಮನ್ನು ಬಿಜೆಪಿಯ ಬಿ ಟೀಂ ಅಂತ ಹೇಳುತ್ತಾರೆ. ಅಂಥಹ ಅಪಪ್ರಚಾರಕ್ಕೆ ಏನು ಮಾಡುವುದು? ಎಲ್ಲರ ಮೈಯಲ್ಲೂ ಹರಿಯುತ್ತಿರೋದು ಕೆಂಪು ರಕ್ತ ಅಲ್ಲವೇ ಎಂದು ಕಾಂಗ್ರೆಸ್, ಬಿಜೆಪಿ ಪಕ್ಷಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕೊರೊನಾದಿಂದ ಜನರ ದುಡಿಮೆ ಏನಾಗಿದೆ ಅನ್ನುವುದು ಗೊತ್ತಿದೆ. ಸಂಪಾದನೆಯಿಂದ ಬಂದ ಹಣದಿಂದ ಎರಡು ಹೊತ್ತು ಊಟಕ್ಕೂ ತೊಂದರೆ ಆಗಿದೆ. ಸರ್ಕಾರ ಯಾವ ರೀತಿ ಆರ್ಥಿಕ ನೆರವು ನೀಡಿದೆ?. ರಾಜಕೀಯ ಮುಖಂಡರು ದಿನಸಿ ಕೊಡುವ ಆಭ್ಯಾಸ ಪ್ರಾರಂಭ ಮಾಡಿದರು. ಆದರೆ ಅದು ಪ್ರಾಮಾಣಿಕವಾಗಿ ಆಗಿದೆಯಾ? ಎಂದು ಪ್ರಶ್ನಿಸಿದರು. ರಾಜ್ಯದ ಆಸ್ತಿ ಲೂಟಿ ಮಾಡಿ ನಿಮಗೆ ತಾತ್ಕಾಲಿಕವಾಗಿ ಕೊಟ್ಟ ದಿನಸಿಗೆ ಪ್ರಚಾರ ತೆಗೆದುಕೊಂಡಿದ್ದಾರೆ. ಇದು ಎಲ್ಲಾ ಭಾಗದಲ್ಲಿ ನಡೆಯುತ್ತಿದೆ. ಇವರು ಶಾಶ್ವತ ಪರಿಹಾರವಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರದ್ದು ಬೂಟಾಟಿಕೆ: ಕಾಂಗ್ರೆಸ್ ನಾಯಕರು ಮತ್ತೆ ಪಾದಯಾತ್ರೆ ಹೊರಟಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಅಂತ ಹೇಳುತ್ತಿದ್ದಾರೆ. ಪಾದಯಾತ್ರೆಯಿಂದ ನೀರು ಸಿಗಲ್ಲ. ಮಹಾದಾಯಿ ವಿಚಾರದಲ್ಲಿ ಆ ಹೆಣ್ಣು ಮಕ್ಕಳಿಗೆ ಎಷ್ಟು ಕಷ್ಟ ಕೊಟ್ಟರು ಎನ್ನುವುದು ಗೊತ್ತಿದೆ. ಅದೆಲ್ಲ ಇವರಿಗೆ ಗೊತ್ತಿಲ್ಲವೆ? ಈಗ ಮೇಕೆದಾಟು ಪಾದಯಾತ್ರೆ ಅಂತಾರೆ. ಎಲ್ಲವೂ ಬೂಟಾಟಿಕೆ ಎಂದು ಟೀಕಿಸಿದರು.
ಇದನ್ನೂ ಓದಿ: ಸ್ನಾನಕ್ಕೆಂದು ಕಲ್ಲು ಕ್ವಾರಿಗಿಳಿದ ಇಬ್ಬರು ಸಾವು
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ಹೆಬ್ಬಾಳದ ಜೆಡಿಎಸ್ ಅಧ್ಯಕ್ಷ ರುದ್ರಪ್ಪ, ಜೆಡಿಎಸ್ ಮುಖಂಡ ಅಬ್ದುಲ್ ಹಾಕೀಂ ಖಾನ್ ಬಾಬು, ಆಲ್ಪಾಫ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.