ಬೆಂಗಳೂರು: ಜಪಾನ್ ಸರ್ಕಾರದ ಅಂಗ ಸಂಸ್ಥೆಯಾದ ಜಪಾನ್ ಅಂತಾರಾಷ್ಟ್ರೀಯ ಸಹಕಾರದ ಏಜೆನ್ಸಿಯ (ಜೆಐಸಿಎ) ಜಪಾನಿ ನಿಯೋಗವು ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತು.
ಇಕೆಡಾ ಮುತ್ಸುಕೊ ನೇತೃತ್ವದಲ್ಲಿ ಜೊಯಂಟಾ ರಾಭಾ ಅವರೊಂದಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಬಿ.ಸಿ.ಯುನ ಜಾಗತಿಕ ಭಾಷಾ ವಿಭಾಗದಲ್ಲಿ ಜಪಾನಿ ಭಾಷಾ ಬೋಧನೆಯ ಕಾರ್ಯಕ್ರಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಿಯೋಗವು ಮಹತ್ವದ ಚರ್ಚೆ ನಡೆಸಿತು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ಕುಲಸಚಿವ ಶ್ರೀಧರ್ ಮತ್ತು ಪ್ರೊ.ರಮೇಶ್ ನಿಯೋಗವು ಭೇಟಿಯಾಗಿ ಮಾಹಿತಿ ವಿನಿಮಯ ಮತ್ತು ಸಹಕಾರದ ಕುರಿತಂತೆ ಚರ್ಚಿಸಿತು.
ಕಳೆದ ತಿಂಗಳು ಸ್ಪಾನಿಷ್ ನಿಯೋಗವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಜಪಾನಿ ನಿಯೋಗವು ಕ್ಯಾಂಪಸ್ಗೆ ಭೇಟಿ ನೀಡಿದೆ. ಶೈಕ್ಷಣಿಕ ಸಹಕಾರದ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಿದ್ದು, ಜಪಾನಿ ಭಾಷಾ ಬೋಧನೆಗೆ ಸ್ಥಳೀಯ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಬಗ್ಗೆಯೂ ನಿಯೋಗವು ಪರಾಮರ್ಶಿಸಿದೆ.
ಜಾಗತಿಕ ಭಾಷೆಗಳ ಕಲಿಕೆಯ ಮೂಲಕ ಆರ್ಥಿಕತೆ, ವ್ಯಾಪಾರ, ವಾಣಿಜ್ಯ, ರಾಜತಾಂತ್ರಿಕ ಸಂಬಂಧಗಳು ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಉದ್ಯೋಗಾವಕಾಶಗಳನ್ನು ಪಡೆಯಬೇಕು. ಜಾಗತಿಕವಾಗಿ ಬೆಳೆಯುವ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕಾದ ಅಗತ್ಯವನ್ನು ಪ್ರೊ. ಲಿಂಗರಾಜ ಗಾಂಧಿಯವರು ಒತ್ತಿ ಹೇಳಿದರು.
ಭಾರತ ಮತ್ತು ಜಪಾನ್ ನಡುವಿನ ಸಾಮಾಜಿಕ-ಸಾಂಸ್ಕಂತಿಕ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಭಾಷಾ ಕಲಿಕೆ ಕಾರ್ಯಕ್ರಮ ಪೂರಕವಾಗಲಿದ್ದು ಆದಷ್ಟು ಬೇಗನೆ ಸೂಕ್ತ ಏರ್ಪಾಡು ಮಾಡುವುದಾಗಿ ಅವರು ನಿಯೋಗಕ್ಕೆ ಭರವಸೆಯತ್ತರು. ಶಿಕ್ಷಣ ಮತ್ತು ತಂತ್ರಜ್ಞಾನದ ಸಮಗ್ರ ದೃಷ್ಟಿಕೋನದ ಸಮನ್ವಯ ಹಾಗೂ ಶಿಕ್ಷಣದಲ್ಲಿ ಆರೋಗ್ಯದ ಅಗತ್ಯಗಳ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕಾದ ಪ್ರಾಮುಖ್ಯತೆ ಇದೆ ಅಂದರು.