ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಐಷಾರಾಮಿ ಬಂಗಲೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿಯಿರುವ ಹೊಸ ಮನೆ ಹಾಗೂ ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯಿರುವ ಮನೆಯ ಮೇಲೆ ಬೆಳಗ್ಗೆ 6 ಗಂಟೆಗೆ ಸುಮಾರು 15 ಮಂದಿ ಇಡಿ ಅಧಿಕಾರಿಗಳು ಆಗಮಿಸಿದ್ದು, ಸತತವಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಜಮೀರ್ ಅಹಮದ್ ನಗರದ ಹಲವೆಡೆ ಆಸ್ತಿ ಹೊಂದಿದ್ದಾರೆ. ಇನ್ನು ಚಾಮರಾಜಪೇಟೆಯಲ್ಲಿರೋ ಜಮೀರ್ ಅಹ್ಮದ್ ಆಫೀಸ್ ಮೇಲೂ ದಾಳಿ ನಡೆಯುವ ಸಾಧ್ಯತೆ ಇದ್ದು, ಸದ್ಯ ಕಚೇರಿ ಕ್ಲೋಸ್ ಆಗಿದೆ. ಬೆಂಗಳೂರು ಮತ್ತು ದೆಹಲಿಯ ನಾಲ್ಕು ತಂಡಗಳು ಈ ದಾಳಿ ನಡೆಸಿ, ಶೋಧ ಕಾರ್ಯದಲ್ಲಿ ತೊಡಗಿವೆ.
ಟ್ರಾವೆಲ್ಸ್ಗೆ ಸಂಬಂಧಪಟ್ಟ ಸಂಪೂರ್ಣ ದಾಖಲೆ ಜೊತೆ ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಟ್ರಾವೆಲ್ಸ್ ಸಿಬ್ಬಂದಿಯಿಂದಲೂ ಮಾಹಿತಿ ಪಡೆಯುತ್ತಿದ್ದಾರೆ. ಸಿಆರ್ಪಿಎಫ್ ಪೊಲೀಸರ ಭದ್ರತೆಯಲ್ಲಿ ಜಮೀರ್ ಅಹಮದ್ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸಂಪುಟ ರಚನೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತರ ಅಸಮಾಧಾನ ಸ್ಫೋಟ