ಬೆಂಗಳೂರು: 'ನಾನು ದನದ ಮಾಂಸ ತಿನ್ನುತ್ತೇನೆ, ಆಹಾರ ಪದ್ಧತಿ ನನ್ನ ಹಕ್ಕು, ಅದನ್ನು ಬೇಡ ಎನ್ನಲು ನೀನು ಯಾರು' ಎಂದು ಅಧಿವೇಶನದಲ್ಲಿ ಕೇಳಿದ್ದೇನೆ. ಆದರೆ, ನಮ್ಮವರು ಇದನ್ನು ಗಟ್ಟಿಯಾಗಿ ಹೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ವಿಚಾರಗಳ ಬಗ್ಗೆ ನಮಗೆ ಮೊದಲು ಸ್ಪಷ್ಟತೆ ಇರಬೇಕು. ನಾನು ಸಿದ್ಧಾಂತಕ್ಕೆ ಬದ್ಧವಾಗಿದ್ದೇನೆ. ನಾವು ನಂಬಿರುವ ಸಿದ್ಧಾಂತಗಳನ್ನು ಗಟ್ಟಿಯಾಗಿ ಹೇಳಬೇಕು. ಕಾಂಗ್ರೆಸ್‍ಗೆ ಹಿನ್ನಡೆಯಾದರೆ ದೇಶದ ಬಡವರಿಗೆ, ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಹಿನ್ನಡೆಯಾದಂತೆ ಎಂದರು.
ನನ್ನ ಆಹಾರ ನನ್ನ ಇಷ್ಟ
ಗೋ ಹತ್ಯೆ ನಿಷೇಧ ಕಾಯ್ದೆ ಹೊಸದಲ್ಲ. 1964ರಲ್ಲೇ ಕಾಂಗ್ರೆಸ್ ಜಾರಿಗೆ ತಂದಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರಲು ಮುಂದಾಗಿದೆ. ಆಯ್ತಪ್ಪಾ ನಾನು ದನದ ಮಾಂಸ ತಿನ್ನುತ್ತೇನೆ. ನೀನು ಯಾವನಯ್ಯ ಕೇಳೋಕೆ. ನೀನು ತಿನ್ನು ಎಂದು ನಾನು ಬಲವಂತ ಮಾಡಲ್ಲ. ನನ್ನ ಆಹಾರ ನನ್ನ ಇಷ್ಟ. ಅದನ್ನು ಕೇಳೋಕೆ ನೀನು ಯಾರು ಎಂಬುದನ್ನು ಹೇಳುವುದಕ್ಕೆ ಹೆಚ್ಚು ಧೈರ್ಯ ಬೇಕೇ? ಎಂದು ಕೇಳಿದರು.
ಓದಿ-ಒಂದಿಷ್ಟು ಸಿಹಿ, ಬಹಳಷ್ಟು ಕಹಿಯೊಂದಿಗೆ 2020 ಮುಗಿಸಿದ ರಾಜ್ಯ ಕಾಂಗ್ರೆಸ್
ವಯಸ್ಸಾದ ಜಾನುವಾರುಗಳನ್ನು ರೈತರು ಏನು ಮಾಡ್ಬೇಕು?
ಮುದಿ ಹಸು, ಎತ್ತು, ಕೋಣಗಳನ್ನು ಸಾಕಲಾಗದ ರೈತರು ಏನು ಮಾಡಬೇಕು. ಇವುಗಳನ್ನು ಸಾಕಲು ದಿನವೊಂದಕ್ಕೆ 100 ರೂಪಾಯಿ ಬೇಕು. ನಿಜ ನಾವು ಹಸುವನ್ನು ದೇವರೆಂದು ಪೂಜಿಸುತ್ತೇವೆ. ರೈತರು ಪೂಜೆ ಮಾಡುತ್ತಾರೆ ಎಂದರು.
ಕಾಂಗ್ರೆಸ್‍ನಲ್ಲಿ ಎಷ್ಟೋ ಜನರಿಗೆ ಪಕ್ಷದ ಸಿದ್ಧಾಂತವೇ ಗೊತ್ತಿಲ್ಲ
ಯುವಕರು ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ತಿಳಿದುಕೊಳ್ಳಬೇಕು. ಸಿದ್ಧಾಂತ ಗೊತ್ತಿಲ್ಲದೆ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಕಾಂಗ್ರೆಸ್‍ನಲ್ಲಿ ಎಷ್ಟೋ ಜನರಿಗೆ ಪಕ್ಷದ ಸಿದ್ಧಾಂತವೇ ಗೊತ್ತಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರ ಇದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಡೋಂಗಿತನ, ಸೋಗಲಾಡಿತನ ಜನರ ಮುಂದೆ ಹೇಳಬೇಕು. ನಮ್ಮ ವಿಚಾರಗಳಲ್ಲಿ ಬದ್ಧತೆ ಇರಬೇಕು ಎಂದು ಸಲಹೆ ನೀಡಿದರು.
ಗಾಂಧೀಜಿ ಕಾಂಗ್ರೆಸ್ ಹುಟ್ಟಿದಾಗ ಸದಸ್ಯತ್ವ ಪಡೆದಿರಲಿಲ್ಲ!
ರಾಜ್ಯಸಭಾ ಸದಸ್ಯ ಎಲ್. ಹನುಂತಯ್ಯ ಅವರು ಮಾತನಾಡುವಾಗ, ಗಾಂಧೀಜಿ ಕಾಂಗ್ರೆಸ್ ಹುಟ್ಟಿದಾಗ ಸದಸ್ಯತ್ವ ಪಡೆದಿರಲಿಲ್ಲ ಎಂದರು. ತಮ್ಮ ಮಾತಿನಲ್ಲಿ ಹನುಮಂತಯ್ಯ ಅವರ ತಪ್ಪು ಹೇಳಿಕೆಯನ್ನು ಸಿದ್ದರಾಮಯ್ಯ ಸರಿ ಪಡಿಸಿದರು. ಗಾಂಧಿಜೀ ಹುಟ್ಟಿದ್ದು 1869ರಲ್ಲಿ, ಕಾಂಗ್ರೆಸ್ ಹುಟ್ಟಿದ್ದು 1885ರಲ್ಲಿ. ಕಾಂಗ್ರೆಸ್ ಹುಟ್ಟಿದಾಗ ಗಾಂಧಿಜೀ ಅವರಿಗೆ ಹದಿನಾರು ವರ್ಷ ಮಾತ್ರವಾಗಿತ್ತು. 1918ರಲ್ಲಿ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾದರು ಎನ್ನುವಾಗ ಸಭೆಯಲ್ಲಿ ಹೋಗ್ಲಿ ಬಿಡಿ ಎಂಬ ಮಾತು ಕೇಳಿ ಬಂತು. ಆಗ ಗದರಿದ ಸಿದ್ದರಾಮಯ್ಯ, ಯಾರೀ ಅದು ಹೋಗ್ಲಿ ಬಿಡಿ ಎಂದಿದ್ದು. ಕಾರ್ಯಕರ್ತರಿಗೆ ತಪ್ಪು ಮಾಹಿತಿ ಹೋಗಬಾರದು ಎಂದು ಹೇಳಿ ಸ್ಪಷ್ಟನೆ ನೀಡಿದರು.