ಬೆಂಗಳೂರು : ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸದ ಈ ಬಜೆಟ್ಗೆ ಪಾವಿತ್ರ್ಯತೆಯೇ ಇಲ್ಲ. ಈಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು ಪ್ರತಿಯೊಬ್ಬರ ಮೇಲೆ 78 ಸಾವಿರ ರೂಪಾಯಿ ಸಾಲ ಹೊರಿಸಿರುವ ಸಾಲದ ಬಜೆಟ್ ಮಂಡಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವಿಧಾನಸಭೆಯಲ್ಲಿಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ನೀರಾವರಿ ಯೋಜನೆ, ಖಾಲಿ ಹುದ್ದೆ ಭರ್ತಿ ಸೇರಿದಂತೆ ಯಾವುದಕ್ಕೂ ನೆರವು ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಈ ಬಜೆಟ್‌ನ ಕಾರ್ಯಕ್ರಮಗಳು ಘೋಷಣೆಗಷ್ಟೇ ಸೀಮಿತವಾಗಿವೆ. ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ರೂ. ಅನುದಾನವನ್ನು ಕಲ್ಯಾಣ ಕರ್ನಾಟಕಕ್ಕೆ ಘೋಷಣೆ ಮಾಡಲಾಗಿದೆ. ಆದರೆ, ಅದರ ಬಳಕೆ ಮಾಡುವಲ್ಲಿ ಭರವಸೆ ಉಳಿಸಿಕೊಂಡಿಲ್ಲ. ಪ್ರತಿ ವರ್ಷ ಅನುದಾನ ಘೋಷಣೆ ಮಾಡುತ್ತಿದ್ದು, ಅನುದಾನದ ಸಮರ್ಪಕ ಬಳಕೆ ಮಾತ್ರ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಕಳೆದ ಎರಡು ವರ್ಷದಲ್ಲಿ 422 ಕೋಟಿ ರೂ. ಮಾತ್ರ ಖರ್ಚು ಮಾಡಿರುವುದಾಗಿ ಇದೇ ವೇಳೆ ಹೇಳಿದ್ದಾರೆ.
ಬಜೆಟ್‌ನಲ್ಲಿ ರಾಜ್ಯದ ಸಾಲವನ್ನು 5.18 ಲಕ್ಷ ಕೋಟಿಗೆ ಮುಟ್ಟಿಸುವುದಾಗಿ ಹೇಳಲಾಗಿದ್ದು, ಇದರ ಅರ್ಥ ಇದು ಸಾಲದ ಬಜೆಟ್. ನಿಮ್ಮ ಆರ್ಥಿಕ ಸಮೀಕ್ಷೆ ಪ್ರಕಾರವೇ ಜಿಲ್ಲಾವಾರು ತಲಾದಾಯದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಹಿಂದುಳಿದಿವೆ. ಕಲ್ಯಾಣ ಕರ್ನಾಟಕದಲ್ಲಿ ಈಗಲೂ ಅಪೌಷ್ಠಿಕತೆ, ರಕ್ತಹೀನತೆಯಿಂದ ಜನರು ಬಳಲುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶೇ.72 ರಷ್ಟು ಹುದ್ದೆಗಳು ಖಾಲಿ ಇವೆ. ಒಟ್ಟು 44 ಇಲಾಖೆಗಳಲ್ಲಿ 16 ಸಾವಿರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಕನಿಷ್ಠ 5 ಸಾವಿರ ಹುದ್ದೆಗಳನ್ನಾದರೂ ಕೂಡಲೇ ಭರ್ತಿ ಮಾಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.
41 ಕ್ಷೇತ್ರಗಳನ್ನು ಪ್ರತಿನಿಧಿಸುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಒಂದು ಸಭೆಯನ್ನೂ ನಡೆಸಿಲ್ಲ. ಅನುದಾನವನ್ನೂ ಸೂಕ್ತವಾಗಿ ಖರ್ಚು ಮಾಡಿಲ್ಲ. ಬೀದರ್‌ನ ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ಇದರ ಅಭಿವೃದ್ಧಿಗೆ ಕನಿಷ್ಠ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಹೇಳಿದ್ದಾರೆ.
ಎಲ್ಲಾ ವಿಭಾಗಗಳಿಗೂ ನೀರಾವರಿ ಯೋಜನೆಗಳನ್ನು ಘೋಷಿಸಿರುವ ಮುಖ್ಯಮಂತ್ರಿಗಳಿಗೆ ಕಲ್ಯಾಣ ಕರ್ನಾಟಕದ ನೀರಾವರಿಗೆ ಯೋಜನೆ ನೀಡಬೇಕು ಎಂದು ಏಕೆ ಅನಿಸಲಿಲ್ಲ? ಇಂತಹ ಧೋರಣೆ ಇರುವ ಬಜೆಟ್ ಗೆ ಪಾವಿತ್ರ್ಯತೆ ಇದೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ : 12ರಿಂದ 14 ವರ್ಷದ ಮಕ್ಕಳಿಗೆ ನಾಳೆಯಿಂದ ವ್ಯಾಕ್ಸಿನ್.. ಗೈಡ್ಲೈನ್ಸ್ ಹೊರಡಿಸಿದ ಕೇಂದ್ರ