ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಬರೆದಿದ್ದ ಆಭ್ಯರ್ಥಿಗಳ ವಿಚಾರಣೆಯನ್ನು ಸಿಐಡಿ ತೀವ್ರಗೊಳಿಸಿದೆ. ಜೊತೆಗೆ, ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ಹಾಗೂ ಎಸಿಪಿಗಳನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ.
ಪಿಎಸ್ಐ ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಕಲಬುರಗಿಯಲ್ಲಿ ಸಿಐಡಿಯ ಒಂದು ತಂಡ ಕೆಲವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ. ಬೆಂಗಳೂರಿನ ಸಿಐಡಿ ಪ್ರಧಾನ ಕಚೇರಿಯಲ್ಲಿಯೂ ಸಿಐಡಿ ವಿಚಾರಣೆ ನಡೆಸುತ್ತಿದೆ. ಇಂದು ಸಹ ಅಭ್ಯರ್ಥಿಗಳ ವಿಚಾರಣೆ ನಡೆಸಲಾಗಿದೆ.
ಅಭ್ಯರ್ಥಿಗಳ ವಿಚಾರಣೆ ಬಳಿಕ ಪೊಲೀಸ್ ನೇಮಕಾತಿ ವಿಭಾಗಕ್ಕೂ ಸಂಕಷ್ಟ ಎದುರಾಗಲಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗಿಯಾದ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಸೂಪರ್ ವೈಸರ್ಗಳು ಹಾಗೂ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದ ಎಸಿಪಿಗಳಿಗೂ ವಿಚಾರಣೆಯ ಬಿಸಿ ತಟ್ಟಲಿದೆ. ಇದುವರೆಗೂ 40ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ತನಿಖಾ ತಂಡ ಹಿಟ್ ಲಿಸ್ಟ್ ಆಗಿ ಮಾಡಿಕೊಂಡಿದೆ. ಮೇಲ್ವಿಚಾರಕರಾಗಿ ನಿಯೋಜನೆಗೊಂಡು ಕಾರಣಾಂತರಗಳಿಂದ ಬದಲಾವಣೆಯಾದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಿದೆ.
ಇದನ್ನೂ ಓದಿ: 'ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿಲ್ಲ'
ಪರೀಕ್ಷಾ ಕೇಂದ್ರಕ್ಕೆ ಆಯಾ ಕಾಲೇಜಿನ ಉಪನ್ಯಾಸಕರೇ ಮೇಲ್ವಿಚಾರಕರಾಗಿದ್ದು, ಒಂದು ಕೇಂದ್ರಕ್ಕೆ ಎಸಿಪಿ ಸೇರಿ 25 ಮಂದಿ ನಿಯೋಜನೆಯಾಗಿದ್ದರು. ಅಭ್ಯರ್ಥಿಗಳು ಕೊಡುವ ಹೇಳಿಕೆ ಮೇಲೆ ಹೆಚ್ಚು ಅವ್ಯವಹಾರ ನಡೆದಿರುವ ಕೇಂದ್ರಗಳ ಪಟ್ಟಿಯನ್ನು ಸಿಐಡಿ ರೆಡಿ ಮಾಡಿಕೊಂಡಿದೆ ಎನ್ನಲಾಗಿದೆ. ಮೇ 1ರಿಂದ ಆಯಾ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಸಿಐಡಿ ಕಚೇರಿಯಲ್ಲೇ ವಿಚಾರಣೆ ಮಾಡಲು ಪ್ಲಾನ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.