ಬೆಂಗಳೂರು : ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಎರಡು ಹಂತಗಳ ಚುನಾವಣೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ರಹಸ್ಯ ವರದಿಯೊಂದನ್ನು ಸರ್ಕಾರಕ್ಕೆ ಗುಪ್ತಚರ ಇಲಾಖೆ ವರದಿ ನೀಡಿದೆ.
15 ಕ್ಷೇತ್ರಗಳಲ್ಲಿ ಬಿಜೆಪಿ, 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ 3 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗ್ತಿದೆ.
ಚುನಾವಣೆಯ ಪೂರ್ವ ಕಾಲದಲ್ಲಿ ಬಿಜೆಪಿಯ ಅಲೆ ಹೆಚ್ಚಿದ್ದಂತೆ ಕಂಡುಬಂದರು ಕಾಲಕ್ರಮೇಣ ಅದರ ಶಕ್ತಿ ಕುಸಿದಿದೆ. ಅದರ ಪರಿಣಾಮವಾಗಿ 15:10:3 ಅನುಪಾತದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆಲುವು ಸಾಧಿಸಲಿವೆ ಎಂದು ಗುಪ್ತಚರ ಇಲಾಖೆ ಹೇಳಿದೆ ಎಂದು ತಿಳಿದು ಬಂದಿದೆ.
ಹಾಸನ, ಮಂಡ್ಯ ಹಾಗೂ ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಿಶ್ಚಿತವಾಗಿ ಜಯ ಗಳಿಸಲಿದೆ. ಇದನ್ನು ಹೊರತುಪಡಿಸಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಬಲ ಹಣಾಹಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಗಳಿಸಿದರೂ ಅಚ್ಚರಿಯಿಲ್ಲ. ಈ ಮಧ್ಯೆ ಕಳೆದ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನೆಡೆಯಾಗಲಿದೆಯಂತೆ.
ಮೈಸೂರು-ಕೊಡಗು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಸೇರಿದಂತೆ ಹಲವು ಕ್ಷೇತ್ರಗಳ ಗೆಲುವು ತೂಗುಯ್ಯಾಲೆಯಲ್ಲಿದೆ. ಉಳಿದಂತೆ ಬಹುತೇಕ ಕ್ಷೇತ್ರಗಳ ಫಲಿತಾಂಶ ನಿಕ್ಕಿಯಾಗಿದ್ದು, ಅಂತಿಮವಾಗಿ ಬಿಜೆಪಿ 15 ಕ್ಷೇತ್ರಗಳಲ್ಲಿ ನಿಶ್ಚಿತವಾಗಿ ಗೆಲ್ಲಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅದೇ ರೀತಿ ಕಾಂಗ್ರೆಸ್ 10 ಲೋಕಸಭಾ ಕ್ಷೇತ್ರಗಳಲ್ಲಿ, ಜೆಡಿಎಸ್ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ವರದಿ ನೀಡಿದ್ದು, ಈ ವರದಿ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಒಂದು ವೇಳೆ ಗುಪ್ತಚರ ಇಲಾಖೆ ನೀಡಿದ ವರದಿಯನುಸಾರ ಫಲಿತಾಂಶ ಬಂದರೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮತ್ತಷ್ಟು ಸುಭದ್ರವಾಗಲಿದ್ದು, ಅದನ್ನು ಉರುಳಿಸುವ ಯಾವ ಯತ್ನಗಳಿಗೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಗುಪ್ತಚರ ಇಲಾಖೆ ಈ ವರದಿ ನೀಡುವುದರ ಹಿಂದೆ ಹಲವು ಅಂಶಗಳು ಕೆಲಸ ಮಾಡಿದ್ದು, ಅಹಿಂದ ಸಮುದಾಯಗಳ ನಾಯಕ ಅನ್ನಿಸಿಕೊಂಡಿರುವ ಸಿದ್ಧರಾಮಯ್ಯ ಅವರು ಮನ:ಪೂರ್ವಕವಾಗಿ ಜೆಡಿಎಸ್ ಗೆಲುವಿಗಾಗಿ ಶ್ರಮಿಸಿದ್ದಾರೆ. ಅದರ ಪರಿಣಾಮವಾಗಿ ಮೈತ್ರಿಕೂಟ ಗಣನೀಯ ಯಶಸ್ಸು ಸಾಧಿಸಲಿದೆಯಂತೆ.
ಅದೇ ರೀತಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡಾ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮನ:ಪೂರ್ವಕವಾಗಿ ಶ್ರಮಿಸಿದ್ದು, ಇದರ ಪರಿಣಾಮವಾಗಿ ಕೈ ಪಾಳೆಯಕ್ಕೂ ಲಾಭವಾಗಿದೆ ಎಂಬುದು ಮೂಲಗಳ ಸ್ಪಷ್ಟ ಅಭಿಪ್ರಾಯವಾಗಿದೆ.
ಹೀಗೆ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಗುಪ್ತಚರ ಇಲಾಖೆ ನೀಡಿರುವ ಆರಂಭಿಕ ವರದಿ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ. ಮುಂದಿನ ತಿಂಗಳ ಮೇ 23 ರವರೆಗೂ ಈ ವಿಷಯದ ಬಗ್ಗೆಯೇ ಹಲವು ಸಮೀಕ್ಷೆಗಳು ಪ್ರಕಟವಾಗಲಿವೆ. ಅಂತಿಮವಾಗಿ ಯಾರ ಭವಿಷ್ಯ ಏನಾಗಲಿದೆ ಮೇ 23 ರವರೆಗೆ ಕಾಯಲೇಬೇಕಿದೆ.