ಬೆಂಗಳೂರು: ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರು 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 450 ಪುಟದ ಚಾರ್ಜ್ಶೀಟ್ನಲ್ಲಿ 20 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. 89 ಜನರನ್ನು ಸಾಕ್ಷಿಯನ್ನಾಗಿಸಿದೆ. ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತ ಭರತ್ ಶೆಟ್ಟಿ ಸಹಚರರಾದ ಶಿವಕುಮಾರ್, ಪ್ರದೀಪ್ ಕುಮಾರ್ ಹಾಗೂ ಉಮಾದೇವಿ ಆರೋಪಿಗಳಾಗಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಯಾದ ಭರತ್ ಶೆಟ್ಟಿಗೆ ಜಾಮೀನು ಸಿಕ್ಕಿದೆ. ಅವರ ಹೇಳಿಕೆಯನ್ನೂ ಚಾರ್ಜ್ಶೀಟ್ನಲ್ಲಿ ದಾಖಲಿಸಲಾಗಿದ್ದು, ರಾಜ್ಯದಲ್ಲಿ ತಾವು ಹೆಸರು ಮಾಡಬೇಕೆಂಬ ಉದ್ದೇಶದಿಂದ ರೈತ ನಾಯಕನಿಗೆ ಮಸಿ ಬಳಿದಿರುವುದಾಗಿ ಹೇಳಿದ ಬಗ್ಗೆ ಇದರಲ್ಲಿದೆ. ಆರೋಪಿಗಳು ಪರಸ್ಪರ ಮಾತನಾಡಿದ ಆಡಿಯೋ ಸಾಕ್ಷಿಯನ್ನು ಕೂಡ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಟಿಕಾಯಿತ್ ರಾಜ್ಯಕ್ಕೆ ಬರುವುದಕ್ಕೂ ಒಂದು ವಾರ ಮೊದಲು ವಿರೋಧಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಮೊದಲು ಟೊಮೆಟೊ ಹಾಗೂ ಕೊಳೆತ ಮೊಟ್ಟೆಯಲ್ಲಿ ಹೊಡೆಯುವುದರ ಬಗ್ಗೆ ನಿರ್ಧರಿಸಲಾಗಿತ್ತು. ಅದು ಸಾಧ್ಯವಾಗದೇ ಇದ್ದಲ್ಲಿ ಗಾಂಧಿಭವನದಲ್ಲಿ ಮಸಿ ಬಳಿಯಲು ತಂತ್ರ ರೂಪಿಸಲಾಗಿತ್ತು.
ಟಿಕಾಯಿತ್ ಮೇಲೆ ಹಲ್ಲೆ ಮಾಡುವ ಉದ್ದೇಶ ಆರೋಪಿಗಳಿಗಿರಲಿಲ್ಲ. ಆದರೆ, ಆರೋಪಿಗಳಲ್ಲಿ ಒಬ್ಬರಾದ ಶಿವಕುಮಾರ್ ಉದ್ವೇಗದಲ್ಲಿ ಮಾಧ್ಯಮದ ಮೈಕನ್ನು ಕಿತ್ತು ಹಲ್ಲೆ ಮಾಡಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಓದಿ: ಚಿಕ್ಕಮಗಳೂರು: ಮನೆ ಮೇಲೆ ಬೃಹತ್ ಮರ ಬಿದ್ದುಇಬ್ಬರು ಮಹಿಳೆಯರ ಸಾವು