ಬೆಂಗಳೂರು : ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯತ್ ಮೇಲೆ ನಡೆದ ಹಲ್ಲೆ ಸಂಬಂಧ ವಶಕ್ಕೆ ಪಡೆದುಕೊಂಡಿದ್ದ ಮೂವರು ಆರೋಪಿಗಳನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ. ಹಿಂದೂಪರ ಮುಖಂಡ ಎಂದು ಗುರುತಿಸಿಕೊಂಡಿದ್ದ ಭರತ್ ಶೆಟ್ಟಿ ಸೇರಿ ಮೂವರ ವಿರುದ್ಧ ಐಪಿಸಿ 355, 354, 324 ,504, 506, 323,134 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ, ಇಂದು ಗಾಂಧಿ ಭವನದಲ್ಲಿ ರೈತರ ಸಭೆ ಆಯೋಜಿಸಲಾಗಿತ್ತು. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುತ್ತಿದ್ದಾಗ ಹಲ್ಲೆ ಮಾಡಿ ಮಸಿ ಬಳಿಯಲಾಗಿದೆ. ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಲು ದಾಳಿ ಮಾಡಿದ್ದಾರೆ ಎಂಬ ಬಗ್ಗೆ ದೂರು ನೀಡಲಾಗಿದೆ.
ಈ ಬಗ್ಗೆ ಈಗಾಗಲೇ ಮೂವರನ್ನ ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಸುದ್ದಿಗೋಷ್ಠಿಗೆ ಅಡ್ಡಿಪಡಿಸಲು ದಾಳಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆ ಬಳಿಕ ಸತ್ಯ ಗೊತ್ತಾಗಲಿದೆ. ಅಲ್ಲಿ ಸೇರಿದ್ದವರು ಮತ್ತು ಮಸಿ ಬಳಿದವರ ಮಧ್ಯೆ ಗಲಾಟೆ ಆಗಿದೆ.
ರೈತರ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆಯಿತ್ತು. ರೈತರ ಸಭೆಗೆ ಆಹ್ವಾನಿತರಾಗಿ ಈ ಮೂವರು ಬಂದಿದ್ದರು. ಸಿಸಿಟಿವಿ ಹಾಗೂ ಮೊಬೈಲ್ ವಿಡಿಯೋಗಳನ್ನು ವಶಕ್ಕೆ ತೆಗೆದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪ್ರಕರಣ ಸಂಬಂಧ ಭರತ್ ಶೆಟ್ಟಿ, ಪ್ರತಾಪ್ ಹಾಗೂ ಶಿವಕುಮಾರ್ ಎಂಬ ಮೂವರನ್ನ ಹೈಗ್ರೌಂಡ್ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನ ಗಾಂಧಿಭವನದಲ್ಲಿ ರೈತ ಚಳವಳಿ-ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆಯಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿಯ್ ಸೇರಿ ರಾಷ್ಟ್ರಮಟ್ಟದ ರೈತ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಟಿಕಾಯತ್ ಮೇಲೆ ಮಸಿ ದಾಳಿ ಮಾಡಲಾಗಿತ್ತು.
(ಇದನ್ನೂ ಓದಿ: ಬೆಂಗಳೂರಿನಲ್ಲಿ ರಾಕೇಶ್ ಟಿಕಾಯತ್, ಯುಧವೀರ್ ಮೇಲೆ ಮಸಿ ಎರಚಿದ ಕಿಡಿಗೇಡಿಗಳು)