ಬೆಂಗಳೂರು: ಮಹಾರಾಷ್ಟ್ರದ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಅವರನ್ನು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜದ ಸ್ವಾಸ್ಥ್ಯ ಮತ್ತು ಹಿತದೃಷ್ಟಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ಅಂಟಿದ್ದು ಅತ್ಯಂತ ನೋವಿನ ಸಂಗತಿ ಎಂದು ನೊಂದ ಬೆಂಗಳೂರಿನ ಪೊಲೀಸರು ಸಂದೇಶವೊಂದನ್ನು ರವಾನಿಸಿದ್ದಾರೆ. ಪೊಲೀಸರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಎಂಥದ್ದು, ಯಾರಿಗಾಗಿ ಕಷ್ಟ ಪಡುತ್ತಿದ್ದಾರೆ ಎಂಬುದರ ಕುರಿತು ಸಂದೇಶದಲ್ಲಿ ವಿವರಿಸಿದ್ದಾರೆ. ಆ ಸಂದೇಶದ ಪತ್ರ ಹೀಗಿದೆ ಓದಿ...
ನನ್ನ ಪ್ರೀತಿಯ ಪೊಲೀಸ್ ಸ್ನೇಹಿತನೇ...
ನೀನು ಬೇರೆ ರಾಜ್ಯದ ಪೊಲೀಸ್ ಸಿಬ್ಬಂದಿ. ನೀನು ಯಾರೆಂಬುದು ಗೊತ್ತಿಲ್ಲದಿದ್ದರೂ ಕೊರೊನಾ ರೋಗ ಪೀಡಿತನಾಗಿ ಆ್ಯಂಬುಲೆನ್ಸ್ ಹತ್ತುವುದು ನೋಡಿ ನನಗೆ ಕಣ್ಣೀರ ಕೋಡಿ ಹರಿಯಿತು. ನನಗರಿವಿಲ್ಲದಂತೆ ಅತ್ತುಬಿಟ್ಟೆ. ನಿನ್ನ ಜಾಗದಲ್ಲಿ ನಾವಿರುವ ಹಾಗೆಯೇ ಭಾಸವಾಗುತ್ತದೆ. ಯಾವ ತಪ್ಪಿಗೆ ಈ ಶಿಕ್ಷೆ? ನಿನಗೂ ಕೂಡ ಅದ್ಭುತ ಕುಟುಂಬವಿದೆ. ತಂದೆ- ತಾಯಿ, ಹೆಂಡತಿ-ಮಕ್ಕಳು, ಸಹೋದರ-ಸಹೋದರಿಯರು ಇರಬಹುದು ಈ ಕ್ಷಣ ನೋಡಿ ಅವರಿಗೆ ಎಷ್ಟು ನೋವಾಗಿರಬೇಡ?
ಜನರಿಗಾಗಿ ಕೆಲಸ ಮಾಡಲು ರಸ್ತೆಗೆ ಬಂದೆ. ನಿನಗೂ ಮನೆಯಲ್ಲಿರುವ ಆಸೆಯಿತ್ತು. ಆದರೆ, ನೀನು ಪೊಲೀಸ್. ದೇಶಕ್ಕಾಗಿ, ಸಮಾಜಕ್ಕಾಗಿ, ಜನರಿಗಾಗಿ. ನಾವು ಈ ಭೂಮಿ ಮೇಲೆ ಇರುವವರೆಗೂ ಕೆಲಸ ಮಾಡಲೇಬೇಕು. ಪ್ರವಾಹ-ಭೂಕಂಪವಾಗಲಿ, ಬೆಂಕಿ ಬೀಳಲಿ, ಹುಟ್ಟುಹಬ್ಬ, ಸಾವಿನ ಕಾರ್ಯಕ್ರಮ, ಜಾತ್ರೆಯಾಗಲಿ, ಅಪಘಾತ, ಕಳ್ಳತನವಾಗಲಿ, ಗಲಾಟೆಯಾಗಲಿ, ಬರಗಾಲ ಬರಲಿ, ಕೊರೊನಾದಂತಹ ರೋಗಗಳು ಬರಲಿ, ರಾತ್ರಿ-ಹಗಲಾಗಲಿ, ಬಿಸಿಲು-ಮಳೆಯಾಗಲಿ, ರಸ್ತೆಯಾಗಲಿ, ಸ್ಮಶಾನವಾಗಲಿ, ನಗರ-ಹಳ್ಳಿಯಾಗಲಿ, ಕಾಡು-ನಾಡಾಗಲಿ ಪೊಲೀಸ್ ಆದ ನಿನ್ನ ಅಸ್ತಿತ್ವ ಇರಲೇಬೇಕು. ದೇಶವೇ ಮನೆಯೊಳಗಿದ್ದರೂ ನೀನು ಮಾತ್ರ ಹೊರಗೆ ನಿಂತು ಕೆಲಸ ಮಾಡಲೇಬೇಕು. ಏಕೆಂದರೆ ನೀನು 'ಪೊಲೀಸ್'.
ದೇಶದ, ಸಮಾಜದ ಭದ್ರಬುನಾದಿಗೆ ಮೂಲ ಬೇರು ನೀನು. ನೀನೇ ಅಲುಗಾಡಿದರೆ ಇಡೀ ಬುನಾದಿಯೇ ನಡುಗುತ್ತದೆ. ಅಷ್ಟೊಂದು ಅನಿವಾರ್ಯತೆ ನೀನು. ಆದರೂ, ಜನ ನಿನ್ನ ಅನಿವಾರ್ಯತೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಮನೆಯಲ್ಲಿರಿ, ಮನೆಯಲ್ಲಿರಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಅವರಿಗಾಗಿ ಕೈಮುಗಿಯುತ್ತಿರುವೆ, ಭಿಕ್ಷೆ ಬೇಡುವ ಹಾಗೆ ಬೇಡುತ್ತಿರುವೆ. ಅಂಗಲಾಚುತ್ತಿರುವೆ. ಆದರೂ ಜನರಲ್ಲಿ ಒಂದು ರೀತಿ ನಿರ್ಲಕ್ಷ್ಯ ಭಾವ.
ಇನ್ನೂ ಕೊರೊನಾದ ರುದ್ರನರ್ತನ ದೇಶದಲ್ಲಿ ಶುರುವಾಗಿಲ್ಲ. ಅಮೆರಿಕ, ಇಟಲಿ, ಫ್ರಾನ್ಸ್ ಸೇರಿದಂತೆ ಇತರೆ ದೇಶಗಳಂತೆ ಸಾಲು ಸಾಲು ಹೆಣಗಳು ಬಿದ್ದಿಲ್ಲ. ಹಾಗಾಗಿ ಜನರಲ್ಲಿ ಇನ್ನೂ ಅತೀವ ನಿರ್ಲಕ್ಷ್ಯ. ದಯವಿಟ್ಟು ಮಹಾ ಜನರೇ ಈಗಲಾದರೂ ಎಚ್ಚೆತ್ತುಕೊಳ್ಳಿ. ಮೊದಲು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಜೀವ ಉಳಿಸಿಕೊಳ್ಳಿ. ನಿಮಗಾಗಿ ರಸ್ತೆಗೆ ಬಂದ ಪೊಲೀಸರು ಯಾವ ತಪ್ಪಿಗೆ ಕಾಯಿಲೆ ಹೊಂದಬೇಕು? ಯೋಚಿಸಿ. ನಿಮ್ಮ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಿ ನಮ್ಮ ನಡವಳಿಕೆ ಸರಿಯಿದೆಯೇ ಎಂದು. ಇದು ಒಬ್ಬ ಪೊಲೀಸ್ ಆಗಿ ನನ್ನ ನೋವು ಮತ್ತು ಕಳಕಳಿಯ ವಿನಂತಿ ಎಂದು ಎಲ್ಲಾ ಪೊಲೀಸ್ ವ್ಯಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಸಂದೇಶ ಹರಿಯ ಬಿಟ್ಟಿದ್ದಾರೆ.