ಬೆಂಗಳೂರು: ರಮೇಶ್ ಜಾರಕಿಹೊಳಿ ಅವರು ಸೆವೆನ್ ಮಿನಿಸ್ಟರ್ ಕ್ವಾಟ್ರಸ್ನ ತಮ್ಮ ನಿವಾಸದಲ್ಲಿ ಅನರ್ಹ ಶಾಸಕರ ಸಭೆ ನಡೆಸಿದರೆ, ಬಿಜೆಪಿಯ ಅತೃಪ್ತ ಶಾಸಕರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದ್ದಾರೆ.
ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಈಗಾಗಲೇ ಸಚಿವ ಸಂಪುಟ ವಿಸ್ತರಿಸಿರುವ, ಅತೃಪ್ತಿ ಹಾಗೂ ತಮ್ಮ ಮುಂದಿನ ಭವಿಷ್ಯದ ಕುರಿತು ಚರ್ಚಿಸಿದ್ದಾರೆ. ಅತ್ತ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು ಬಿಜೆಪಿ ಶಾಸಕರ ಸಭೆ ನಡೆಸಿರುವುದು ವಿಶೇಷ.
ಸಚಿವ ಲಕ್ಷ್ಮಣ ಸವದಿ ಭೇಟಿ: ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂತನ ಸಚಿವ ಲಕ್ಷ್ಮಣ ಸವದಿ ಆಗಮಿಸಿದರು. ಜೊತೆಗೆ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಕೂಡ ಬಂದರು. ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಲಕ್ಷ್ಮಣ್ ಸವದಿ ಆಗಮಿಸಿ ಮಾತುಕತೆ ನಡೆಸಿದರು. ಕೆಲ ಹೊತ್ತಿನ ನಂತರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಕೂಡ ಮಾತುಕತೆ ನಡೆಸಿದ್ದಾರೆ.
ಸ್ವಲ್ಪ ಹೊತ್ತು ಚರ್ಚೆ ನಡೆಸಿದ ಬಳಿಕ ಎಂಟಿಬಿ ನಾಗರಾಜ್, ಆರ್.ಶಂಕರ್ ಹೊರ ನಡೆದರು. ಆರ್.ಶಂಕರ್ ಮಾತನಾಡಿ, ನಾವು ಆಗಾಗ ಟೀ-ಕಾಫಿಗೆ ಭೇಟಿ ಮಾಡ್ತೇವೆ. ಇವತ್ತು ಸಚಿವರ ಪ್ರಮಾಣ ವಚನ ಇತ್ತು. ಅದಕ್ಕೆ ಎಲ್ಲರೂ ಬೆಂಗಳೂರಿಗೆ ಬಂದಿದ್ರು. ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಅನರ್ಹ ಶಾಸಕರ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿರುವ ಕಾರಣ ನಮಗೆ ಕೊಟ್ಟಿಲ್ಲ ಅಷ್ಟೇ ಎಂದರು.