ಬೆಂಗಳೂರು: 30 ಕ್ಕೂ ಹೆಚ್ಚು ಕೈಗಾರಿಕೋದ್ಯಮ ಹಾಗೂ ವಾಣಿಜ್ಯ ಒಕ್ಕೂಟ ಪದಾಧಿಕಾರಿಗಳು ನಗರದ ಫಿಕ್ಕಿ ಕಚೇರಿಯಲ್ಲಿ ಸಭೆ ನಡೆಸಿ, ರಾಜ್ಯದಲ್ಲಿ ಮಂಗಳವಾರ ಸಂಜೆಯಿಂದ ಆಯ್ದ ಜಿಲ್ಲೆಗಳಲ್ಲಿ ಲಾಕ್ಡೌನ್ ವಿಧಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಲಾಕ್ಡೌನ್ ಇಲ್ಲವೆಂದು ಭಾವಿಸಿ ಹಲವಾರು ಆರ್ಡರ್ ತೆಗೆದುಕೊಳ್ಳಲಾಗಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಕೈಗಾರಿಕೆಗಳು ನಶಿಸುತ್ತವೆ. ನಮ್ಮ ಅಭಿಪ್ರಾಯ ತೆಗೆದುಕೊಳ್ಳದೆ ಲಾಕ್ಡೌನ್ ಹೇರಿಕೆ ಶೋಚನೀಯ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ್ ಅವರು ಕಾಸಿಯಾ, ಪೀಣ್ಯ ಕೈಗಾರಿಕಾ ಸಂಘದ ಪರವಾಗಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದರು.
ನಿತ್ಯ ಸಾವಿರಾರು ಕೊರೊನಾ ಪ್ರಕರಣ ಪತ್ತೆಯಾಗುತ್ತಿರುವ ಮುಂಬೈ, ಗುಜರಾತ್ ಹಾಗೂ ಇನ್ನಿತರ ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ. ಮತ್ತೆ ಲಾಕ್ಡೌನ್ ಹೇರಿದರೆ ಕೈಗಾರಿಕಾ ವಲಯ ಚೇತರಿಕೆ ಕಾಣದೆ ಹಳಿ ತಪ್ಪುತ್ತದೆ. ಸರ್ಕಾರ ಯಾವುದೇ ನಿಯಮಗಳನ್ನು ಹೇಳಿದರೆ ಅದನ್ನು ಪಾಲಿಸುತ್ತೇವೆ. ಈಗ ಸರ್ಕಾರ ಹೇಳಿದಂತೆ ಅಂತರ, ಸ್ಯಾನಿಟೈಸರ್, ಮಾಸ್ಕ್ ನಿಯಮಗಳನ್ನು ಪಾಲಿಸುತ್ತಿದ್ದೇವೆ ಎಂದರು.
ಇದೆ ವೇಳೆ ಮಾತನಾಡಿದ ಕಾಸಿಯಾ ಅಧ್ಯಕ್ಷ ಅರಸಪ್ಪ, ಈವರೆಗೆ ಒಂದೂ ಕೊರೊನಾ ಪ್ರಕರಣ ನಗರದ ಕೈಗಾರಿಕೆಗಳಲ್ಲಿ ಪತ್ತೆಯಾಗಿಲ್ಲ. ಈಗ ಕೆಲ ಕ್ಷೇತ್ರಗಳಲ್ಲಿ ರಫ್ತು ಆರ್ಡರ್ ಬರುತ್ತಿದೆ. ಮತ್ತೆ ಲಾಕ್ ಡೌನ್ ಮಾಡಿದರೆ ಕೈಗಾರಿಕೆಗಳ ಆರ್ಥಿಕ ಸ್ಥಿತಿ ಕುಸಿಯಲಿದೆ ಎಂದರು.
ಹಲವಾರು ಕೈಗಾರಿಕೆಗಳಲ್ಲಿ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಉದ್ದಿಮೆದಾರರು, ನಾವು ಎಲ್ಲ ನಿಯಮ ಪಾಲನೆ ಮಾಡುತ್ತಿದ್ದೇವೆ. ನಮಗೂ ಆರೋಗ್ಯದ ಬಗ್ಗೆ ಕಾಳಜಿ ಇದೆ. ಇವೆಲ್ಲಾ ಆಧಾರ ರಹಿತ ಆರೋಪ ಎಂದು ತಳ್ಳಿಹಾಕಿದರು.
ನಗರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾತನಾಡಿ, ಸರ್ಕಾರ ವಾಣಿಜ್ಯೋದ್ಯಮಿಗಳ ಜೊತೆ ಕಳ್ಳ ಪೊಲೀಸ್ ಆಟ ಆಡುತ್ತಿದೆ. 2 ದಿನಗಳ ಹಿಂದೆ ಮುಖ್ಯಮಂತ್ರಿ ನಮಗೆ ಲಾಕ್ಡೌನ್ ಇರುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು. ಇದೇ ನಿಮ್ಮ ಮಾತಿನ ಬೆಲೆ ಏನು ಎಂದು ಪ್ರಶ್ನಿಸಿದರು.
ರೂಮ್ ವ್ಯವಸ್ಥೆ ಬೇಕು ಎಂದು ಸರ್ಕಾರ ಹೇಳಿದ ಕೂಡಲೇ ಹೋಟೆಲ್ ಮಾಲೀಕರು ಸೇರಿ ಒಂದು ದಿನದಲ್ಲಿ 3000 ರೂಮ್ ವ್ಯವಸ್ಥೆ ಮಾಡಿಕೊಟ್ಟಿದ್ದೆವು. ಇನ್ನು ಲಾಕ್ಡೌನ್ ಸಂದರ್ಭದಲ್ಲಿ ಉಚಿತವಾಗಿ ಊಟ ತಯಾರಿಸಿ ಹಂಚಲಾಗಿತ್ತು. ಸರ್ಕಾರ ನಮ್ಮ ಅಭಿಪ್ರಾಯ ಕೇಳದೆ ನಿರ್ಧಾರ ಕೈಗೊಂಡಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಪ್ರಸ್ತುತವಾಗಿ ಹೋಟೆಲ್ ಮಾಲೀಕರು ಊರಿಗೆ ತೆರಳಿದ ನೌಕರರನ್ನು ವಾಪಸ್ ಕರೆಸಿದ್ದಾರೆ. ಈಗ ಮತ್ತೆ ಲಾಕ್ಡೌನ್ ಹೇರಿದರೆ ಕಷ್ಟವಾಗುತ್ತದೆ ಎಂದು ತಿಳಿಸಿದರು.