ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರ 104ನೇ ಜನ್ಮ ದಿನ(Indira gandhi birth anniversary) ಕಾರ್ಯಕ್ರಮ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲಿ ನಡೆಯಲಿದೆ.
ಬೆಂಗಳೂರಿನ ಆನಂದ್ ರಾವ್ ವೃತ್ತದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈಗಾಗಲೇ ದಿಲ್ಲಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK shivakumar) ಹಾಗೂ ಇಂದು ಮಧ್ಯಾಹ್ನ ಎರಡು ದಿನದ ಪ್ರವಾಸ ಪ್ರಯುಕ್ತ ಮೈಸೂರಿಗೆ ಪ್ರಯಾಣ ಬೆಳೆಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾರಂಭಕ್ಕೆ ಅನುಪಸ್ಥಿತರಾಗಲಿದ್ದಾರೆ.
'ಶಕ್ತಿ ಸ್ಥಳ'ಕ್ಕೆ ತೆರಳಿ ಪುಷ್ಪ ನಮನ:
ಪಕ್ಷದ ವರಿಷ್ಠರನ್ನು ಭೇಟಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಹಾಗೂ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ಪಟ್ಟಿಗೆ ಸಹಿ ಪಡೆಯುವ ಉದ್ದೇಶದಿಂದ ನಿನ್ನೆ(ಗುರುವಾರ) ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸ್ಮಾರಕ 'ಶಕ್ತಿ ಸ್ಥಳ'ಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಕೆಪಿಸಿಸಿ ಆಯೋಜಿಸಿರುವ ಸಮಾರಂಭಕ್ಕೆ ಅವರು ಹಾಜರಾಗುವುದಿಲ್ಲ. ತೆರಳಿರುವ ಕೆಲಸ ಇಂದೇ ಪೂರ್ಣಗೊಂಡರೆ ರಾತ್ರಿ ವಾಪಸ್ ಆಗಲಿದ್ದಾರೆ. ಇಲ್ಲವಾದರೆ ಇನ್ನೊಂದು ದಿನ ದೆಹಲಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನ ಮೈಸೂರು ಜಿಲ್ಲಾ ಪ್ರವಾಸ:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ( Opposition Leader Siddaramaiah) ಇಂದಿನಿಂದ (ಶುಕ್ರವಾರ) ಎರಡು ದಿನ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಡುವ ಅವರು ಹುಣಸೂರಿನ ಸಿದ್ದರಾಮೇಶ್ವರ ದೇವಸ್ಥಾನ ಉದ್ಘಾಟನೆ, ಕಾಂಗ್ರೆಸ್ ಮುಖಂಡ ದೇವರಾಜು ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಆಯಿರಹಳ್ಳಿ ಗ್ರಾಮಕ್ಕೆ ಭೇಟಿ ನೀಡಲಿರುವ ಸಿದ್ದರಾಮಯ್ಯ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಎರಡು ದಿನದ ಹಿಂದೆ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಿದ್ದರಾಮಯ್ಯಗೆ ಪಕ್ಷದ ವತಿಯಿಂದ ಅವಮಾನವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿಂದೆಯೂ ಒಂದೆರಡು ಸಾರಿ ಪಕ್ಷದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಸೂಕ್ತ ಗೌರವ ಸಲ್ಲಿಕೆ ಆಗಿರಲಿಲ್ಲ. ಇದರಿಂದಾಗಿಯೇ ಅವರು ಇಂದಿನ ಕಾರ್ಯಕ್ರಮದಿಂದ ದೂರವೇ ಉಳಿದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರೈತರು ಕೃಷಿ ಕಾನೂನು ವಿರೋಧಿಸಿದ್ದೇಕೆ? ಸರ್ಕಾರ ಮಣಿದಿದ್ದೇಕೆ? ಇಲ್ಲಿದೆ ಫುಲ್ ಡೀಟೇಲ್ಸ್..